ಹೀಗೇ ನಡೆಯುತ್ತದೆ ಎಂದು ಆತನಿಗೆ ಮೊದಲೇ ತಿಳಿದಿತ್ತು.
ಚಿಲಕ ಕಳಚಿದ ಸದ್ದಿನೊಂದಿಗೆ ತೆರೆದುಕೊಂಡ ಬಾಗಿಲಿನೊಳಗೆ ಪ್ರವೇಶಿಸಿದ, ರಿವಾಲ್ವರ್ ಹಿಡಿದ ತೆಳ್ಳನೆ ಆಸಾಮಿಯನ್ನು ಆತ ಯಾವುದೇ ಗಾಬರಿಯಿಲ್ಲದೆ ಎದುರುಗೊಳ್ಳುವವನಂತೆ, ತಾನು ಹೊದ್ದಿದ್ದ ಬೆಡ್ ಶೀಟನ್ನು ಸರಿಸಿ ಎದ್ದು ನಿಂತ.
ಆತನೊಂದಿಗೆ ಮತ್ತೆರಡು ಮಂದಿ ಒಳಪ್ರವೇಶಿಸಿದರು.
"ನಾವು ನಿನ್ನನ್ನು ಬಂಧಿಸುತ್ತಿದ್ದೇವೆ ಮಿಸ್ಟರ್ ರಾಮ್ಸನ್, ಗಲಾಟೆ ಮಾಡದೆ ಹೊರಟು ಬಿಡು" ಅವರಲ್ಲಿ ಒಬ್ಬ ನುಡಿದ.
ರಾಮ್ಸ್ ನಸುನಕ್ಕ. ವಿಷಾದದ ಗೆರೆ ಆತನ ತುಟಿಗಳಲ್ಲಿ ಪ್ರತಿಫಲಿಸಿತು. ತಾನೇನು ಮಾಡಿದರೂ ಅವರು ತನ್ನ ಜೀವಕ್ಕೆ ಅಪಾಯ ಮಾಡುವುದಿಲ್ಲ ಎಂಬುದು ಆತನಿಗೆ ಖಾತರಿಯಿತ್ತು. ರಿವಾಲ್ವರ್ ಬಿಡಿ, ಸಣ್ಣ ಬ್ಲೇಡಿನ ಚೂರು ಕೂಡಾ ಆತನಲ್ಲಿ ಇಲ್ಲದೇ ಇರುವುದು ಬಂಧನಕಾರರಿಗೂ ಸ್ಪಷ್ಟವಾಗಿ ತಿಳಿದಿತ್ತು. ಆದುದರಿಂದಲೇ ಅವರು ರಾಮ್ಸ್ನನ್ನು ದೈಹಿಕವಾಗಿ ಬಂಧಿಸುವ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಚಕಚಕನೆ ಉಡುಪು ತೊಟ್ಟ ರಾಮ್ಸ್ ಹೊರಡಲಣಿಯಾದ.
"ನಿಮ್ಮ ಅಭ್ಯಂತರ ಇದ್ದರೂ, ಇಲ್ಲದಿದ್ದರೂ ನಾನು ಈ ಸಿಗರೇಟು ಪೊಟ್ಟಣ ಮತ್ತು ಸಿಗಾರ್ ಲೈಟರನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ" ರಾಮ್ಸ್ ಬಲವಂತದ ನಗು ನಗುತ್ತ ನುಡಿದ.
ಸಿಬ್ಬಂದಿಯೊಬ್ಬ ಮುಂದುವರಿದು ಸಿಗಾರ್ ಲೈಟರನ್ನು ಪರೀಕ್ಷಿಸತೊಡಗಿದ.
ಸಾಮಾನ್ಯ ಪೆಟ್ರೋಲ್ ಇಂಧನದ ಲೈಟರದು. ತಳಭಾಗದಲ್ಲಿ ಪ್ರತ್ಯೇಕ ಎರಡು ವಿಭಾಗಗಳು. ಒಂದರಲ್ಲಿ ಕಪ್ಪನೆಯ ದ್ರವ. ಅದರಲ್ಲಿ ತೇಲಾಡುವ ಮಿಲಿಮೀಟರ್ ಉದ್ದದ ಹುಳುಗಳು. ಮತ್ತೊಂದು ಭಾಗದಲ್ಲಿ ಕೆಂಪು ದ್ರವ. ಅದರಲ್ಲೂ ಅದೇ ತೆರನಾದ ಬಿಳಿ ಕೀಟಗಳಂತಹ ಜೀವಿಗಳು. ಅದು ಇತ್ತೀಚೆಗಿನ ಹೊಸ ಶೈಲಿಯ ಲೈಟರು ಎಂದೆನಿಸಿ ಪರೀಕ್ಷಕ "ಅಭ್ಯಂತರವಿಲ್ಲ" ಎನ್ನುವಂತೆ ರಾಮ್ಸ್ಗೆ ಹಸ್ತಾಂತರಿಸಿದ.
"ನನ್ನ ಹಿರಿಯರ ಅಚ್ಚು ಮೆಚ್ಚಿನ ಕೊಡುಗೆ ಇದು. ಇದು....." ರಾಮ್ಸ್ನ ಧ್ವನಿಗಳನ್ನು ತುಂಡರಿಸಿದ ರಿವಾಲ್ವರ್ಧಾರಿ "ಸರಿ ಹೊರಡು"ಎಂದ.
ಲಿಫ್ಟ್ ಒಂದೊಂದೇ ಮಹಡಿಯನ್ನು ಬಳಸಿ ಕೆಳಗಿಳಿಯಿತು. ಹೊರಭಾಗದಲ್ಲಿ ಸಿದ್ಧ ಸ್ಥಿತಿಯಲ್ಲಿಟ್ಟ ಮೂರು ಕಾರುಗಳು. ಮಧ್ಯದಲ್ಲಿರುವ ಕಾರಿನೊಳಗೆ ರಾಮ್ಸ್ ಮತ್ತು ಇಬ್ಬರು ಸಿಬ್ಬಂದಿಗಳು ತೂರಿಕೊಂಡರು. ಮುಂಭಾಗದಲ್ಲೊಂದು ಕಾರು ದಾರಿ ತೋರಿಸುವಂತೆ, ಹಿಂಭಾಗದ ಕಾರು ಹಿಂಬಾಲಿಸುವಂತೆ ವೇಗವಾಗಿ ಸಾಗತೊಡಗಿತು.
ಸಿಗರೇಟು ತುಟಿಗಿಟ್ಟು ಲೈಟರಿಂದ ಹೊತ್ತಿಸಿ ಹೊಗೆ ಬಿಡತೊಡಗಿದ ರಾಮ್ಸ್. ಸಿಗರೇಟು ಆತನದೇನೂ ದೌರ್ಬಲ್ಯವಲ್ಲ. ಆದರೆ ಆ ಲೈಟರು ಸದಾ ಆತನ ಬಳಿಯಲ್ಲಿರಬೇಕು. ಅದಕ್ಕಾಗಿ ಸಿಗರೇಟಿನ ನೆಪ. ಅದೇ ಸಿಗಾರ್ ಲೈಟರಿನ ತಳಭಾಗದಲ್ಲಿ ಓಲಾಡುವ ಹುಳುಗಳನ್ನು ದಿಟ್ಟಿಸತೊಡಗಿದ ರಾಮ್ಸ್. `ಇನ್ನೊಂದು ತಿಂಗಳು ಮಕ್ಕಳೇ... ಆಮೇಲೆ ನಿಮಗೆ ಮುಕ್ತಿ" ಮನದೊಳಗೆ ಅಂದುಕೊಂಡ.
ಕಾರು ನಿಂತಿತು. ಪಕ್ಕದಲ್ಲಿ ಕುಳಿತಿದ್ದ ಸಿಬ್ಬಂದಿ ಬಾಗಿಲು ತೆರೆದು ಕೆಳಗಿಳಿದ "ಬಾ, ಇಳಿ" ಎನ್ನುತ್ತಿದ್ದಂತೆ ರಾಮ್ಸ್ ಕೆಳಗಿಳಿದ. ಹೆಲಿಕಾಪ್ಟರೊಂದು ಇವರಿಗಾಗಿ ಕಾಯುವಂತಿತ್ತು. ಹೆಲಿಕಾಪ್ಟರ್ ಏರಿ ಕುಳಿತುಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಶಸ್ತ್ರಧಾರಿಗಳಾಗಿ ಕುಳಿತರು. ಹೆಲಿಕಾಪ್ಟರ್ ಮೇಲೇರಿತು.
ರಾಮ್ಸ್ಗೆ ತಾನೆಲ್ಲಿಗೆ ಹೋಗುತ್ತಿರುವೆನೆಂಬುದು ಸ್ಪಷ್ಟವಾಗಿ ಅರಿವಾಗಿತ್ತು. ಹೆಲಿಕಾಪ್ಟರ್ ರಾಜಧಾನಿಯ ಪಕ್ಕದ ಮೈದಾನದಲ್ಲಿ ಇಳಿಯಲಿದೆ. ಅಲ್ಲಿಂದ ನೇರವಾಗಿ ತನ್ನ ಅಣ್ಣನ ಪ್ರಯೋಗಾಲಯಕ್ಕೆ ತನ್ನನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಪ್ರಯೋಗವೊಂದರ ರಹಸ್ಯವನ್ನು ಬಯಲು ಮಾಡಲು ಒತ್ತಾಯಿಸಲಾಗುತ್ತದೆ. ತಾನು ಅಲ್ಲಿ ಮೂಕನಂತೆ ಸುಮ್ಮನೆ ಕುಳಿತುಕೊಳ್ಳುತ್ತೇನೆ. ಅನಂತರ ತನ್ನನ್ನು ಪಕ್ಕದ ನಗರದ ಅಪರಾಧಿ ವಿಭಾಗಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಮೂರನೇ ದಜರ್ೆಯ ವಿಚಾರಣೆ ನಡೆಸಲಾಗುತ್ತದೆ. ಯಾವುದೇ ರಹಸ್ಯ ಮೂರನೇ ದಜರ್ೆಯ ವಿಚಾರಣೆಯಿಂದ ಖಂಡಿತಾ ಹೊರಬೀಳುತ್ತದೆ. ಆದರೆ ನನ್ನ ಬಾಯಿಯಿಂದ ರಹಸ್ಯ ಖಂಡಿತಾ ಹೊರಬೀಳದು. ಯಾಕೆಂದರೆ... ಯಾಕೆಂದರೆ... ಈ ಮೂರ್ಖರು ನನಗೆ ಅರಿವಿದೆ ಎನ್ನುವ ರಹಸ್ಯ ತನಗೆ ತಿಳಿದೇ ಇಲ್ಲ. ಖಾಲಿ ಬುರುಡೆಯಿಂದ ಬ್ರಹ್ಮಸತ್ಯವನ್ನು ಹೊರಡಿಸುವ ಮುಠ್ಠಾಳ ಮಂದಿ ಇವರು. ರಾಮ್ಸ್ ನೀಳವಾಗಿ ಉಸಿರು ಬಿಡುತ್ತಾ ನಸುನಕ್ಕ.
ಹೆಲಿಕಾಪ್ಟರ್ ಮೈದಾನದಲ್ಲಿ ಇಳಿಯಿತು. ರಾಮ್ಸ್ನನ್ನು ಹತ್ತಿಸಿಕೊಂಡ ಬಿಳಿ ಕಾರು ಆತನ ಅಣ್ಣನ ಪ್ರಯೋಗಶಾಲೆಗೆ ಕರೆದೊಯ್ಯಿತು. ಆತ ಯೋಚಿಸಿದಂತೆ ಆತನನ್ನು ಅಲ್ಲಿ ಕುಳ್ಳಿರಿಸಲಾಯಿತು. ಮಿಲಿಟರಿಯ ವಿಜ್ಞಾನಿಯ ದಿರಿಸು ಹಾಕಿದ ಅಧಿಕಾರಿಯೊಬ್ಬ ಆತನ ಮುಂದೆ ಕುಳಿತ.
"ನೋಡು ಮಿಸ್ಟರ್ ರಾಮ್ಸ್ನ್ ನೀನು ಹಠಮಾಡಬೇಡ. ನಾವು ದೇಶಕ್ಕಾಗಿ ಯಾವುದೇ ಸೇವೆ ಮಾಡಲು ಸಿದ್ಧರಿರಬೇಕೆಂಬುದನ್ನು ಮರೆಯಬೇಡ...."
"ದೇಶಸೇವೆ...?" ರಾಮ್ಸ್ ಅಸಹನೆಯಿಂದ ಅಧಿಕಾರಿಯ ಮುಖದಿಂದ ತನ್ನ ನೋಟನ್ನು ಹೊರಳಿಸಿದ. ಆತನ ದೃಷ್ಟಿ ದೂರದಲ್ಲಿದ್ದ ಕುಚರ್ಿಯೊಂದರಲ್ಲಿ ಕೇಂದ್ರೀಕೃತವಾಯಿತು...
******
ತಾನು ಪ್ರಥಮ ಬಾರಿಗೆ ಈ ಪ್ರಯೋಗಾಲಯಕ್ಕೆ ಕಾಲಿಟ್ಟಾಗ ಅಣ್ಣ ಅದೇ ಕುಚರ್ಿಯಲ್ಲಿ ಕುಳಿತು "ಬಾರೋ ನನ್ನ ಪ್ರೀತಿಯ ಹುಡುಗ ಬಾ.." ಅಂದಿದ್ದ. ಅತ್ತಿಗೆ ಅಕ್ಕರೆಯಿಂದ ಹತ್ತಿರ ಬಂದು ತಲೆ ನೇವರಿಸಿದ್ದಳು...
ಆ ದಿನಗಳಲ್ಲಿ ರಾಮ್ಸ್ ತನ್ನಣ್ಣನ ಪ್ರಯೋಗಗಳನ್ನು ತಲೆಕೆರೆಯುತ್ತಾ ಏನೊಂದೂ ಅರ್ಥವಾಗದೆ ವೀಕ್ಷಿಸುತ್ತಿದ್ದ.
"ನೋಡು ರಾಮ್ಸ್ ಜಗತ್ತು ತನ್ನದೇ ಆದ ನಿಧರ್ಾರಗಳೊಂದಿಗೆ ಮುಂದುವರಿಯುತ್ತದೆ. ನನ್ನಂತಹ ಮಾನವ "ವಿಜ್ಞಾನಿ" ಎಂಬ ಶಂಖದಲ್ಲಿ ನಾನು ಕಂಡು ಹಿಡಿದೆ...ನಾನು ಕಂಡು ಹಿಡಿದೆ ಎಂದು ಊದುತ್ತಿರುತ್ತಾನೆ. ನಾನೊಂದು ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಅದೆಷ್ಟು ಅಪಾಯಕಾರಿ ಎಂದರೆ ಮಾನವನ ಸಾವಿರಾರು ವರ್ಷಗಳ ಪ್ರಯತ್ನಕ್ಕೆ ಸಡ್ಡು ಹೊಡೆದು ತಿಂಗಳೊಳಗೆ ಎಲ್ಲವನ್ನೂ ಮಣ್ಣುಗೂಡಿಸುತ್ತದೆ. ನೋಡು ಸರಕಾರ ನನಗೆಲ್ಲಾ ಸೌಲಭ್ಯವನ್ನು ಕೊಟ್ಟಿದೆ. ವಿನಾಶಕಾರಿ ಪ್ರಯೋಗದಲ್ಲಿ ನನ್ನನ್ನು ತೊಡಗಿಸಿದೆ. ನಾನು ಅಂತಿಮ ಘಟ್ಟಕ್ಕೆ ಬಂದಿದ್ದೇನೆ. ಅದರ ಫಲಿತಾಂಶ ಅದೆಷ್ಟು ಭೀಕರ ಎಂದರೆ ಅದನ್ನು ಯೋಚಿಸಿ ನಾನು ನಡುಗುತ್ತಿದ್ದೇನೆ. ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಬೇಕೆಂಬ ಹೆಬ್ಬಯಕೆಯಿಂದ ಇತರ ರಾಷ್ಟ್ರಗಳನ್ನು ಹೇಗಾದರೂ ನಾಶಪಡಿಸಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ನಮ್ಮ ಸರಕಾರದ ಕೈಗೆ ಇನ್ನೂ ಪೂತರ್ಿಯಾಗದ ಈ ಪ್ರಯೋಗ ಸಿಕ್ಕಿಬಿಟ್ಟರೆ... ಎಲ್ಲಿಯಾದರೂ ಇತರ ರಾಷ್ಟ್ರದ ಮೇಲೆ ಪ್ರಯೋಗಿಸಲ್ಪಟ್ಟರೆ... ಜಗತ್ತು ಒಮ್ಮಲೇ ಸಾವಿರಾರು ವರ್ಷಗಳಷ್ಟು ಹಿಂದೆ ಸರಿಯಲಿದೆ. ಮಾತ್ರವಲ್ಲ ಅದರ ಪರಿಣಾಮವನ್ನು ಊಹಿಸಲೂ ಅಸಾಧ್ಯ. ಜಪಾನ್ನ ನಗರಗಳ ಮೇಲುದುರಿದ ಪರಮಾಣು ಬಾಂಬಿನ ಪರಿಣಾಮಗಳನ್ನು ತಿಳಿದ ಮೇಲೆ... ಪ್ರಯೋಗಾಲಯದಿಂದ ಸೋರಿಹೋದ ಸಾಸರ್್, ಏಡ್ಸ್ನಂತಹ ಭೀಕರ ರೋಗಗಳ ಅನಾಹುತ ಅರಿತ ಮೇಲೆ ಜೀವ ಹೋದರೂ ಮತ್ತೋರ್ವ ಅಂತಹ ಕೆಲಸ ಮಾಡಲಾರ".
ರಾಮ್ಸ್ ತುಸು ಬೆದರಿದ. ಅಣ್ಣನ ಸಂಶೋಧನೆ ಯಾವುದು ಎಂದು ಕೇಳಲು ಮತ್ತಷ್ಟು ಹೆದರಿದ....
*****
"ಹಠಮಾಡಬೇಡ ಮಿಸ್ಟರ್ ರಾಮ್ಸನ್... ಹೀಗೆ ಮುಂದುವರಿದರೆ ನಿನಗೆ ಮೂರನೇ ದಜರ್ೆಯ ವಿಚಾರಣೆಯ ಶಿಕ್ಷೆ ನೀಡಬೇಕಾಗುತ್ತದೆ. ನಿನ್ನ ಜೀವನದ ಅರ್ಧ ಆಯಸ್ಸು ಆ ಶಿಕ್ಷೆಯಿಂದ ಕಳೆದುಕೊಳ್ಳಲಿರುವೆ ಎಂಬುದು ನಿನಗೆ ತಿಳಿದಿರಬಹುದು. ನನಗೆ ನಿನ್ನ ಮೇಲೆ ಕರುಣೆ ಬರುತ್ತಿದೆ ಹೇಳಿಬಿಡು... " ಮಿಲಿಟರಿ ಅಧಿಕಾರಿ ರಾಮ್ಸ್ನ ಯೋಚನಾ ಲಹರಿಯನ್ನು ಕತ್ತರಿಸಿದ.
"ಊಹುಂ... ನೀವೇನೇ ಮಾಡಿದರೂ ನಾನು ಹೇಳಲಾರೆ... ಯಾಕೆಂದರೆ ನನಗೇನೂ ಗೊತ್ತಿಲ್ಲ... ಖಂಡಿತಾ ನನ್ನನ್ನು ನಂಬಿ" ರಾಮ್ಸ್ ಗೋಗರೆದ.
ಮಿಲಿಟರಿ ಅಧಿಕಾರಿಯ ಮುಖ ಕೆಂಪಗಾಯಿತು. ರಾಮ್ಸ್ನ ಮುಖಕ್ಕೆ ರಪ್ಪನೆ ಬಾರಿಸಿದ "ಎದ್ದೇಳು ಹಾಳು ಕತ್ತೆ..." ಎಂದು ಆರ್ಭಟಿಸಿದ.
"ಈತನನ್ನು ಮೂರನೇ ದಜರ್ೆಯ ಪ್ರಯೋಗಾಲಯಕ್ಕೆ ಕರೆದೊಯ್ಯಿರಿ" ಎಂದು ಮಿಲಿಟರಿ ಅಧಿಕಾರಿ ತನ್ನ ನಾಲ್ವರು ಠೊಣಪ ಸಿಬ್ಬಂದಿಗಳಿಗೆ ಆಜ್ಞಾಪಿಸಿದ.
ರಾಮ್ಸ್ ಮತ್ತು ನಾಲ್ಕು ಮಂದಿಯನ್ನು ಹತ್ತಿಸಿಕೊಂಡ ಕಾರು ಮುನ್ನಡೆಯಿತು. ಅಲ್ಲಿಯವರೆಗೆ ಶಾಂತವಾಗಿದ್ದ ಪರಿಸ್ಥಿತಿ ಬದಲಾವಣೆ ಕಂಡಿತು. ಠೊಣಪರು ರಾಮ್ಸ್ಗೆ ಕಿರುಕುಳ ನೀಡಲಾರಂಭಿಸಿದರು.
ಕಾರು ದೇಶದ ಪ್ರಖ್ಯಾತ ಅಣೆಕಟ್ಟು "ನೀಲ ಹದ್ದ"ನ್ನು ಬಳಸಿಕೊಂಡು ಸಾಗತೊಡಗಿತು.
ಜಗತ್ತಿನಲ್ಲೇ ಅತ್ಯಾಧುನಿಕ "ನೀಲ ಹದ್ದಿ"ನ ಸುಂದರ ದೃಶ್ಯ ರಾಮ್ಸ್ನ ಕಣ್ಣಿಗೆ ಗೋಚರಿಸಿತು. ಒಂದು ಬದಿ ವಿಶಾಲ ಸಾಗರದಂತೆ. ಮತ್ತೊಂದು ಬದಿ ಆಳ ಪ್ರಪಾತ. ಪ್ರಪಾತದೆಡೆಗೆ ತೂರಿಬರುವ ಕಾರಂಜಿಯಂತಹ ನೀರು. ದೇಶದ ಅರ್ಧಭಾಗಕ್ಕೆ ವಿದ್ಯುತ್ ಒದಗಿಸುವ ಜನರೇಟರು ಕಟ್ಟಡಗಳು.. ಒಟ್ಟಾರೆಯಾಗಿ ನೋಡಿದಲ್ಲಿ ದೇಶದ ಆಥರ್ಿಕ ಶಕ್ತಿಯ ಬೆನ್ನೆಲುಬಾಗಿ ಹೆಮ್ಮೆಯಿಂದ ನೀಲ ಬಣ್ಣದ ಗಿಡುಗನಂತೆ ಕಂಗೊಳಿಸುತ್ತಿತ್ತು "ನೀಲಹದ್ದು". ಅದರ ಮಧ್ಯಭಾಗದ ಸೇತುವೆಯಲ್ಲಿ ರಾಮ್ಸ್ನನ್ನು ಹೊತ್ತುಕೊಂಡ ಕಾರು ಚಲಿಸುತ್ತಿತ್ತು.
ಠೊಣಪನೊಬ್ಬ ಸಿಗರೇಟು ತೆಗೆದು ತುಟಿಗಿರಿಸಿ, ಲೈಟರಿಗಾಗಿ ತಡಕಾಡಿದ. ಲೈಟರು ಕಾಣೆಯಾಗಿತ್ತು. ಮತ್ತೆ ಮೂವರ ಬಳಿಯೂ ಲೈಟರಿರಲಿಲ್ಲ. ಓರ್ವ ಠೊಣಪ "ರಾಮ್ಸ್ ಬಳಿ ಲೈಟರಿದೆ" ಅಂದ. ರಾಮ್ಸ್ನ ಪ್ರತಿಭಟನೆಯ ನಡುವೆ ಆತನ ಕಿಸೆಗಳನ್ನು ಶೋಧಿಸಲಾಯಿತು. ಪ್ಯಾಂಟಿನ ಕಿಸೆಯೊಳಗಿದ್ದ ಲೈಟರ್ ಠೊಣಪನೊಬ್ಬನ ಕೈ ಸೇರಿತು. ಆತ ಲೈಟರ್ ಉರಿಸಲಾರಂಭಿಸಿದ.
ಇಂಧನ ಖಾಲಿಯಾದ ಲೈಟರ್ ಕ್ಷಣಕಾಲ ಉರಿದು ಆರಿಹೋಯಿತು. ಠೊಣಪ ಅಸಹನೆಯಿಂದ ಬೈಯ್ದಾಡಿದ. "ಪ್ಲೀಸ್ ಲೈಟರ್ ಕೊಟ್ಟುಬಿಡು" ರಾಮ್ಸ್ ಗೋಗರೆದ. ಠೊಣಪ ಗಹಗಹಿಸಿ ನಕ್ಕ. "ಉರಿಯದ ಲೈಟರ್ ನಿನಗ್ಯಾಕೋ ಮೂರ್ಖ" ಎಂದು ಗೇಲಿ ಮಾಡಿದ.
"ನನಗೆ ಬೇಕು... ನನಗೆ ಬೇಕು" ಪುಟ್ಟ ಮಗುವಿನಂತೆ ರಾಮ್ಸ್ ಆಸನದಿಂದೆದ್ದ. ಠೊಣಪರಿಗೆ ಅದೊಂದು ಹಾಸ್ಯ ಪ್ರಸಂಗವಾಗಿಬಿಟ್ಟಿತ್ತು. ಒಬ್ಬನ ಕೈಯಿಂದ ಇನ್ನೊಬ್ಬನ ಕೈಗೆ ಲೈಟರ್ ಕುಣಿಯತೊಡಗಿತು. ರಾಮ್ಸ್ ಭ್ರಾಂತಿಗೊಳಗಾದವನಂತೆ ಅವರೊಂದಿಗೆ ಲೈಟರಿಗಾಗಿ ಹೋರಾಟಕ್ಕಿಳಿದ. ಕಾರು ತುಂಬ ಠೊಣಪರ ವ್ಯಂಗ್ಯ ಕೇಕೆ ತುಂಬಿ ಹೋಯಿತು.
ಠೊಣಪನೊಬ್ಬ ಲೈಟರನ್ನು ರಭಸವಾಗಿ ಹೊರಗೆಸೆದ...
ಲೈಟರಲ್ಲೇ ದೃಷ್ಟಿ ನೆಟ್ಟಿದ್ದ ರಾಮ್ಸ್, ಅದು ಅಣೆಕಟ್ಟಿನ ಕಾಂಕ್ರೀಟು ಆವರಣ ಗೋಡೆಗೆ ಬಡಿದು ಪುಡಿ ಪುಡಿಯಾಗಿ ಅದರೊಳಗಿದ್ದ ದ್ರವ ಚೆಲ್ಲಿ ಹೋದುದನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದ...
ಈಗ ರಾಮ್ಸ್ನ ದೇಹದೊಳಗೆ ದೆವ್ವ ಪ್ರವೇಶವಾದಂತಾಗಿತ್ತು. ಠೊಣಪನೊಬ್ಬನ ಮೂಗಿಗೆ ಗುದ್ದಿದ. ಬಳ್ಳನೆ ರಕ್ತ ಹರಿಯಿತು. ಮತ್ತೊಬ್ಬನ ಕಣ್ಣಿಗೆ ತನ್ನ ತೋರು ಬೆರಳಿನಿಂದ ಕುಕ್ಕಿದ ಆತ ಕಣ್ಣು ಮುಚ್ಚಿ ನೋವಿನಿಂದ ಸಣ್ಣಗೆ ಚೀರಿದ. ಇನ್ನೊಬ್ಬನ ದವಡೆಗೆ ಬಾರಿಸಿದ. ಕಾರು ಸೇತುವೆ ಮೇಲೆ ಅಡ್ಡಾದಿಡ್ಡಿಯಾಗಿ ಚಲಿಸತೊಡಗಿತು. ಕಾರು ಚಲಾಯುಸುತ್ತಿದ್ದ ಠೊಣಪ ಎಡಕೈಯಲ್ಲಿ ಸ್ಟೇರಿಂಗ್ ಹಿಡಿದು ಬಲಕೈಯಿಂದ ರಾಮ್ಸ್ನ ಕುತ್ತಿಗೆಯ ತಳಭಾಗಕ್ಕೆ ಘಾತಿಸಿದ. ರಾಮ್ಸ್ ಕುಸಿದ. ಆತನ ಸ್ಮೃತಿ ತಪ್ಪಿತು.
ಕಾರು ಅಣೆಕಟ್ಟಿನ ಅಂತಿಮ ಹಂತವನ್ನು ದಾಟಿತು.
ಕುತ್ತಿಗೆಯಲ್ಲಿ ತುಸು ನೋವು ಅರಿವಾದಾಗ ರಾಮ್ಸ್ ಮೆಲ್ಲನೆ ಕಣ್ಣುತೆರೆದ. ಕಾರು ಸಾಗುತ್ತಲೇ ಇತ್ತು. ಪಕ್ಕಕ್ಕೆ ದೃಷ್ಟಿ ಹಾಯಿಸಿದ. ಠೊಣಪ ಮೂಗೊತ್ತಿ ಕುಳಿತಿದ್ದ. ಮತ್ತೊಬ್ಬನ ಕಣ್ಣು ಕೆಂಪಗಾಗಿ ನೀರಿಳಿಯುತ್ತಿತ್ತು.
"ನೀವು ಮೂರ್ಖರು ಮತ್ತೊಬ್ಬರ ದುಃಖ ಅರಿಯದವರು ನಿಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಲ್ಲವರು" ರಾಮ್ಸ್ ಬೊಬ್ಬಿರಿದ.
ಠೊಣಪರು ಅವಕ್ಕಾದರು. ರಾಮ್ಸ್ನ ರೌದ್ರಾತಾರ ಅವರಿಗೆ ಬಲು ದೊಡ್ಡ ಪ್ರಶ್ನೆಯಾಗಿತ್ತು. ಆತನ ಭುಜಗಳನ್ನು ಆಸನಕ್ಕೊತ್ತಿ ಹಿಡಿದು ಮಿಸುಕಾಡದಂತೆ ಮಾಡಿದರು. ರಾಮ್ಸ್ ಬಯ್ದಾಡುತ್ತಲೇ ಇದ್ದ. ಆತನ ಶಾಂತತೆಯ ಅರಿವಿದ್ದ ಠೊಣಪರಿಗೆ ಈಗ ರೌದ್ರ ನರ್ತನ ಪರಿಚಯವಾಗುತ್ತಿತ್ತು. ಅವರು ಪಾತಾಳಕ್ಕಿಳಿದು ಹೋಗಿದ್ದರು. ಆತನಿಗೇನಾದರೂ ಅಪಾಯವಾದರೆ ಅವರ ಕತ್ತಿಗೆ ನೇಣು ಬೀಳುವ ಸಾಧ್ಯತೆಯಿತ್ತು. ಅಂತಹ ಕಟ್ಟಾಜ್ಞೆ ಅವರಿಗಿತ್ತು.
"ಸರ್... ಕೇವಲ ಜುಜುಬಿ, `ಉರಿಯದ ಸಿಗಾರ್ ಲೈಟರಿ'ಗಾಗಿ ನೀವು ಈ ರೀತಿ ಮಾಡುವುದೇ.....?" ಓರ್ವ ಅತೀ ವಿನಯವಾಗಿ ನುಡಿದ.
"ನಿನಗೇನು ಗೊತ್ತು ಮೂರ್ಖ...ಆ ಲೈಟರಿನಲ್ಲಿ ಪ್ರಪಂಚದ ಭವಿಷ್ಯ ಅಡಗಿತ್ತೆಂದು. ನಾನು ಮನಸ್ಸು ಮಾಡಿದ್ದರೆ ಪ್ರಪಂಚದ ಸರ್ವನಾಶವನ್ನೇ ನನ್ನಣ್ಣನ ಸಾವಿನ ಸೇಡಿಗಾಗಿ ಮಾಡುತ್ತಿದ್ದೆ. ಆದರೆ ನನಗದು ಇಷ್ಟವಿರಲಿಲ್ಲ. ನನ್ನ ಅಣ್ಣ ಯಾವ ಪಾಪಕ್ಕೆ ಹೆದರಿ ಇಹಲೋಕ ತ್ಯಜಿಸಿದನೋ ಅಂತಹ ಪಾಪವನ್ನು ನಾನು ಮಾಡಬಲ್ಲನೇ? ಅಣ್ಣ, ಅತ್ತಿಗೆಯರನ್ನು ಮಾತ್ರ ಹೊಂದಿದ್ದ ನಾನು ಅವರಿಬ್ಬರನ್ನು ಕಳೆದುಕೊಂಡು ಅನುಭವಿಸಿದ ದುಃಖ ನಿನಗೇನು ಗೊತ್ತು. ಅದನ್ನು ಅನುಭವಿಸಿದ ನಂತರ ನಾನು ಸಾಮೂಹಿಕ ವಿನಾಶಕ್ಕೆ ಮನಸ್ಸು ಮಾಡಬಲ್ಲೆನೇ? ನೀವು ಮಾಡಿಬಿಟ್ಟಿರಿ... ನಿಮ್ಮ ಬಂಧು.. ಬಳಗ.. ದೇಶದ ವಿನಾಶವನ್ನು, ನಿಮ್ಮ ವಿನಾಶವನ್ನು.. ನಿಮ್ಮ ಕೈಯಾರೆ ಮಾಡಿಬಿಟ್ಟಿರಿ. ನೀವು ತಿಳಿಗೇಡಿಗಳು... ಮೂರ್ಖರು.... ಆ ಉರಿಯದ ಲೈಟರಿನ ಮೂಲಕ ಪ್ರಪಂಚಕ್ಕೆ ಕೊಳ್ಳಿಯಿಟ್ಟವರು..."
ರಾಮ್ಸ್ ಮತಿಭ್ರಾಂತಿಗೊಳಗಾಗಿದ್ದ.
ಆತನ ಆರ್ಭಟ ಠೊಣಪರಿಗೆ ಕಬ್ಬಿಣದ ಕಡಲೆಯಾಗಿತ್ತು.
ಮೂರನೇ ದಜರ್ೆಯ ಪ್ರಯೋಗಾಲಯದ ಆವರಣವನ್ನು ಹೊಕ್ಕ ಕಾರನ್ನು ಸ್ವಾಗತಿಸಲು ಸಿದ್ಧನಾಗಿ ಮಿಲಿಟರಿ ಅಧಿಕಾರಿಯೊಬ್ಬ ನಿಂತಿದ್ದ. ಕಾರಿನಿಂದ ನಾಲ್ಕು ಮಂದಿ ಠೊಣಪರು ಅಪರಾಧಿ ಪ್ರಜ್ಞೆಯನ್ನು ಮೈ ತುಂಬಾ ಹೊತ್ತುಕೊಂಡವರಂತೆ ತಲೆ ತಗ್ಗಿಸಿ ಇಳಿದರು. ರಾಮ್ಸ್ ಹುಚ್ಚನಂತಾಡುತ್ತಿದ್ದ. ಕಾರಿನಿಂದ ಇಳಿಯಲು ನಿರಾಕರಿಸುತ್ತಿದ್ದ "ನೀವು ನನ್ನನ್ನು ಕೊಂದು ಬಿಡಿ" ಎಂದು ಅರಚುತ್ತಿದ್ದ.
ಮಿಲಿಟರಿ ಅಧಿಕಾರಿ ಕಾರಿನ ಬಾಗಿಲೆಡೆ ಧಾವಿಸಿದ. ಠೊಣಪರು ನಡೆದ ಘಟನೆಯ ವರದಿ ಒಪ್ಪಿಸಿದರು. ವ್ಯಘ್ರಗೊಂಡ ಮಿಲಿಟರಿ ಅಧಿಕಾರಿ "ನೀವು ಕೆಲಸಕ್ಕೆ ಬಾರದ ವ್ಯಕ್ತಿಗಳು" ಎಂದು ಬೈಯ್ದಾಡಿದ. ತಕ್ಷಣ ಅವರ ಬಂಧನಕ್ಕೆ ಆಜ್ಞಾಪಿಸಿದ.
ರಾಮ್ಸ್ ಮತಿವಿಕಲನಾಗಿದ್ದ. ಆತನನ್ನು ವಸತಿಗೃಹವೊಂದರಲ್ಲಿ ಸಕಲ ಸೌಲಭ್ಯಗಳೊಂದಿಗೆ ರಾಜ ಮಯರ್ಾದೆಯಲ್ಲಿ ಬಂಧನದಲ್ಲಿಡಲಾಯಿತು. "ಅನಾರೋಗ್ಯದಿಂದಿರುವವನಿಗೆ ಮೂರನೇ ದಜರ್ೆಯ ವಿಚಾರಣೆಯ ಶಿಕ್ಷೆ ನೀಡಲು ದೇಶದ ಕಾನೂನು ಸಮ್ಮತಿ ನೀಡುತ್ತಿರಲಿಲ್ಲ. ಚಿಕಿತ್ಸೆ ನೀಡುವುದರೊಂದಿಗೆ ರಾಮ್ಸ್ನ ಚಲನವಲನಗಳು, ವರ್ತನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲಾಗುತ್ತಿತ್ತು. ತ್ತೊಂಭತ್ತು ಶೇಕಡಾ ಆರೋಗ್ಯವಂತನಾದ ರಾಮ್ಸ್ನಿಗೆ ಮೂರನೇ ದಜರ್ೆಯ ವಿಚಾರಣೆ ಮಾಡುವ ದಿನಾಂಕವನ್ನು ಗೊತ್ತು ಮಾಡಲಾಯಿತು.
ಮಿಲಿಟರಿ ಅಧಿಕಾರಿ ರಾಮ್ಸ್ನ ಕೊಠಡಿಯೊಳಗೆ ಕುಳಿತು ಕುಶಲೋಪರಿ ವಿಚಾರಿಸಲಾರಂಭಿಸಿದ. ದೂರದರ್ಶನದ ಪರದೆಯಲ್ಲಿ ಸುದ್ಧಿ ಬಿತ್ತರವಾಗುತ್ತಿತ್ತು. ಮಿಲಿಟರಿ ಅಧಿಕಾರಿಯ ಮುಖ ನೋಡದೆ, ಅನ್ಯಮನಸ್ಕನಾಗಿ ದೂರದರ್ಶನ ನೋಡುತ್ತಿದ್ದ ರಾಮ್ಸ್ ಇದ್ದಕ್ಕಿದ್ದಂತೆ ಗಂಭೀರನಾದ. ಸುದ್ಧಿಯೊಂದು ಆತನ ಮೇಲೆ ಪ್ರಭಾವ ಬೀರಲಾರಂಭಿಸಿತು. ಮಿಲಿಟರಿ ಅಧಿಕಾರಿ ಕುತೂಹಲಭರಿತನಾಗಿ ರಾಮ್ಸ್ ಮತ್ತು ದೂರದರ್ಶನದ ಕಡೆ ದೃಷ್ಟಿ ಬದಲಿಸುತ್ತಾ ನೋಡತೊಡಗಿದ.
"ನೀಲ ಹದ್ದಿನ" ಮೇಲಿನ ಹಂತದಲ್ಲಿ ಸಣ್ಣಗೆ ಬಿರುಕು ಕಾಣಿಸುತ್ತಿದ್ದು ನೀರು ಸೋರಲಾರಂಭಿಸಿದೆ. ಅಧಿಕಾರಿಗಳು ನಿಯಂತ್ರಣ ಕಾರ್ಯದಲ್ಲಿ ಮಗ್ನರಾಗಿದ್ದರೂ ವಿಶ್ವಾಸಭರಿತರಾಗಿಲ್ಲ. ಇಂತಹ ಬಿರುಕುಗಳು ಅಣೆಕಟ್ಟಿನ ಮೇಲು ಹಂತದಿಂದ ಕೆಲಹಂತದವರೆಗೂ ಅಲ್ಲಲ್ಲಿ ಕಾಣಿಸಿಕೊಂಡಿದೆ. ಆ ಬಿರುಕುಗಳಲ್ಲಿ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಕೀಟಗಳು ಗುಂಪು ಗುಂಪಾಗಿ ಗೋಚರಿಸುತ್ತಿವೆಯೆಂದು ಅವರು ಹೇಳುತ್ತಿದ್ದು ಇದಕ್ಕೆ ಕಾರಣವೇನೆಂದು ಸಂಶೋಧಿಸಲಾಗುತ್ತಿದೆ. ಆದರೆ ಅದು ಸಫಲತೆಯನ್ನು ನೀಡಿಲ್ಲ. ಹೀಗೆ ಮುಂದುವರಿದಲ್ಲಿ ಇನ್ನೊಂದು ದಿವಸದೊಳಗೆ ಅಣೆಕಟ್ಟು ಒಡೆದು ಹೋಗುವ ಸಂಭವವಿದ್ದು ಪರಿಹಾರ ಕಾರ್ಯಗಳ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಯೋಚಿಸಲಾಗುತ್ತಿದೆ. ಅಣೆಕಟ್ಟಿನ ಪರಿಸರದಿಂದ ಜನರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ..."
ಮಿಲಿಟರಿ ಅಧಿಕಾರಿಯ ಮುಖ ಬಿಳುಚಿಕೊಂಡಿತು.
ರಾಮ್ಸ್ ರೌದ್ರಾವತಾರ ತಾಳಿದ್ದ...
"ನೀವು ಪಾಪಿಗಳು... ಪಾಪದ ಫಲ ದೇಶವಾಸಿಗಳೆಲ್ಲಾ ಉಣ್ಣಬೇಕಾಗಿದೆ... " ಎಂದು ಕಿರುಚಾಡುತ್ತಾ ಕೈಗೆ ಸಿಕ್ಕ ವಸ್ತುಗಳನ್ನು ಅಧಿಕಾರಿಯ ಮೇಲೆಸೆಯಲಾರಂಭಿಸಿದ. ಸಿಬ್ಬಂದಿಗಳು ಧಾವಿಸಿ ರಾಮ್ಸ್ನನ್ನು ಬಂಧಿಸಿದರು.
ಮತ್ತೆರಡು ದಿನಗಳಲ್ಲಿ ಭೀಕರ ಆಘಾತ ದೇಶವನ್ನು ಅಪ್ಪಳಿಸಿತು. "ನೀಲಹದ್ದು" ಭಯಂಕರವಾಗಿ ಒಡೆದು ಹೋಗಿತ್ತು. ಲಕ್ಷಾಂತರ ಮಂದಿಯ ಆಸ್ತಿ ಪಾಸ್ತಿಗಳು ನಷ್ಟವಾಗಿತ್ತು. ಲೆಕ್ಕವಿಲ್ಲದಷ್ಟು ಜನ ಕೊಚ್ಚಿ ಹೋಗಿದ್ದರು. ಎರಡು ಪ್ರಖ್ಯಾತ ನಗರಗಳು ಇನ್ನಿಲ್ಲದಂತೆ ನಾಶವಾಗಿತ್ತು...
ರಾಮ್ಸ್ನ ಹುಚ್ಚುತನ ಮೇರೆ ಮೀರಿತ್ತು. ಯಾರಿಗೂ ಆತನನ್ನು ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಮಿಲಿಟರಿ ಅಧಿಕಾರಿಗಳಿಗೆ ಈತನ ಹುಚ್ಚುತನದ ಬಗ್ಗೆ ಸಂಶಯ ಮೂಡಿತು. ಆತನ ಅಣ್ಣ ಕಂಡುಹಿಡಿದಿರುವ ರಹಸ್ಯದಿಂದಲೇ ಈ ಅನಾಹುತ ಎಂಬುದಾಗಿ ಅವರಿಗೆ ಸ್ಪಷ್ಟವಾಗಿತ್ತು. ಅದೇನೆಂದು ತಿಳಿಯಲು ಸಹಾಯಕವಾಗುವ ಮೂರನೇ ದಜರ್ೆಯ ಪರೀಕ್ಷೆಗೆ ಕಾನೂನು ಸಮ್ಮತಿಸುತ್ತಿರಲಿಲ್ಲ. ಅಸ್ತವ್ಯಸ್ತಗೊಂಡ ದೇಶದ ಪರಿಸ್ಥಿತಿಯ ಮೂಲವನ್ನು ತಿಳಿಯಲು ಅನಿವಾರ್ಯವಾಗಿ ಕಾನೂನು ಮುರಿಯಲು ನಿರ್ಧರಿಸಲಾಯಿತು.
ರಾಮ್ಸ್ ಮೂರನೇ ದಜರ್ೆಯ ಪ್ರಯೋಗಾಲಯದ ಅಪರಾಧಿ ಕುಚರ್ಿಯಲ್ಲಿ ಕಟ್ಟಿಹಾಕಲ್ಪಟ್ಟಿದ್ದ...
ವಿವಿಧ ರೀತಿಯ ತಂತಿಗಳು ಆತನ ದೇಹವಿಡೀ ಬಿಗಿಯಲ್ಪಟ್ಟಿತು.
"ಸ್ಟಾರ್ಟ್" ಎಂದ ಕೂಡಲೇ ಗುಂಡಿ ಅದುಮಲ್ಪಟ್ಟಿತು. ಕುಳಿತಲ್ಲಿಂದಲೇ ತುಸು ಕುಪ್ಪಳಿಸಿದ ರಾಮ್ ಮತ್ತೆ ಯಥಾ ಸ್ಥಿತಿಗೆ ಬಂದ. ತೇಲುಗಣ್ಣಿನ ಮೂಲಕ ಮಿಲಿಟರಿ ಅಧಿಕಾರಿಯ ಮುಖವನ್ನು ದಿಟ್ಟಿಸಲಾರಂಭಿಸಿದ.
"ಹೇಳು ಮಿಸ್ಟರ್ ರಾಮ್ಸನ್... ನಿನ್ನ ಅಣ್ಣನ ಪ್ರಯೋಗದ ಬಗ್ಗೆ ಹೇಳು" ಮಿಲಿಟರಿ ಅಧಿಕಾರಿ ಪ್ರಶ್ನಿಸಿದ.
"ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನನ್ನ ಅಣ್ಣ ಯಾವ ರೀತಿಯ ಪ್ರಯೋಗದಲ್ಲಿ ನಿರತನಾಗಿದ್ದನೆಂದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ....."
"ಮೂರನೇ ದಜರ್ೆಯ ಪ್ರಯೋಗ ವಿಫಲವಾಯಿತೇ...?"
ಅಧಿಕಾರಿ ಅಚ್ಚರಿಯಿಂದ ಗೊಣಗಿದ. ಆತನ ಮುಖ ವಿವರ್ಣವಾಯಿತು. ಇಂತಹ ವಿಚಾರಣೆಯಲ್ಲಿ ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡುತ್ತಿದ್ದ ಅಪರಾಧಿಗಳು ಆತನಿಗೆ ಈವರೆಗೆ ಸಿಕ್ಕಿದ್ದರು. ಈತನೇಕೆ ಹೀಗೆ... ಪ್ರಾಯಶಃ ತಾನು ತಪ್ಪು ದಾರಿಯಲ್ಲಿ ಸಾಗುತ್ತಿದ್ದೇನೆಯೇ? ಎಂಬ ಪ್ರಶ್ನೆಯು ಆತನನ್ನು ಕಾಡಿತು.
"ಹಾಗಾದರೆ ನಿನಗೆ ಗೊತ್ತಿರುವುದೇನು ಹೇಳು...." ಅಧಿಕಾರಿ ವಿಶ್ವಾಸ ಹೀನನಾಗಿ ಪ್ರಶ್ನಿಸಿದ.
"ನನಗೆ ಇಷ್ಟೇ ಗೊತ್ತು. ಅಣ್ಣ ದೂರವಾಣಿಯ ಮೂಲಕ ನನಗೆ ಹೇಳಿದ್ದ ನಾವು ವಿಶಿಷ್ಠರೀತಿಯ ಪ್ರಯೋಗದಲ್ಲಿ ತೊಡಗಿದ್ದೇವೆ. ಇದು ಯಶಸ್ವಿಯಾದರೆ ಜಗತ್ತು ಒಮ್ಮೆಲೇ ಸಾವಿರಾರು ವರ್ಷಗಳ ಹಿಂದೆ ಸರಿಯಲಿದೆ. ಆದರೆ ಅದನ್ನು ಪ್ರಪಂಚವನ್ನೇ ಗೆಲ್ಲಲು ಹೊರಟ ದೇಶದ ಕೈಗೆ ನೀಡಲು ನನಗೆ ಮನಸ್ಸಿಲ್ಲ. ಇವರಿಗೆ ನನ್ನ ಮೇಲೆ ಸಂಶಯವಿದೆ ನಾವೆಲ್ಲಿಯಾದರೂ ಓಡಿಹೋಗುತ್ತೇವೆಯೊ ಎಂಬ ಭಯ ಇವರನ್ನು ಕಾಡುತ್ತಿದೆ. ನಾನು ಮೂರನೇ ದಜರ್ೆಯ ವಿಚಾರಣೆ ಎದುರಿಸುವ ಭೀತಿಯಲ್ಲಿದ್ದೇನೆ. ಅಲ್ಲಿ ನನ್ನ ಪ್ರಯೋಗದ ರಹಸ್ಯ ಬಹಿರಂಗವಾಗುವ ಸಾಧ್ಯತೆ ಇದೆ. ಆದುದರಿಂದ ಕೂಡಲೇ ಬಂದು ಬಿಡು. ನನ್ನ ಆಸ್ತಿ ಹಣ ಎಲ್ಲವನ್ನು ನಿನ್ನ ವಶಕ್ಕೆ ಒಪ್ಪಿಸುವ ಏಪರ್ಾಡು ಮಾಡಿದ್ದೇನೆ. ತಕ್ಷಣ ಹೊರಟು ಬಿಡು" ಎನ್ನುತ್ತಿದ್ದಂತೆ ರಾಮ್ಸ್ನ ಆಯಾಸಗೊಂಡಿದ್ದ.
"ಮುಂದೇನಾಯಿತು ಹೇಳು" ಅಧಿಕಾರಿ ಕುತೂಹಲ, ಆತುರದಿಂದ ಪ್ರಶ್ನಿಸಿದ.
"ಮುಂದೆ.... ಮುಂದೆ ನಾನು ಅಣ್ಣನ ಪ್ರಯೋಗಾಲಯಕ್ಕೆ ಹೋಗಿ ನೋಡಿದ್ದು ಅಣ್ಣ ಅತ್ತಿಗೆಯರನ್ನಲ್ಲ. ಕೇವಲ ಅವರ ಮೃತ ಶರೀರವನ್ನು ಅವರಿಬ್ಬರೂ ಯಾವುದೋ ಭೀತಿಯಿಂದ ಗುಂಡಿಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದರು. ಅಣ್ಣನ ಮೇಜಿನ ಮೇಲೆ ಒಂದು ಪತ್ರ, ಒಂದು ಲಕೋಟೆ ಮತ್ತೊಂದು ಸಿಗಾರ್ ಲೈಟರ್ ನನಗಾಗಿ ಕಾಯುತ್ತಿತ್ತು. ನಡುಗುವ ಕೈಗಳಿಂದ ಪತ್ರ ಎತ್ತಿಕೊಂಡಿದ್ದೆ.
ಪ್ರೀತಿಯ ರಾಮ್ಸ್...
ನಾವಿಬ್ಬರೂ ಸತ್ತಿದ್ದೇವೆ. ಜಗತ್ತನ್ನು ನಾಶ ಮಾಡುವ ಪ್ರಯೋಗ ಮಾಡುವ ಮಂದಿಗೆ ಇನ್ನು ಮುಂದೆಯೂ ಇದೇ ಗತಿಯಾಗಬೇಕು. ನೀನೇನೂ ಯೋಚನೆ ಮಾಡಬೇಡ ನನ್ನೆಲ್ಲಾ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದ ಉಯಿಲಿನ ಲಕೋಟೆ ಇಲ್ಲಿದೆ. ಅದರೊಂದಿಗೆ ಸಿಗಾರ್ ಲೈಟರ್ ಒಂದಿದೆ. ಅದನ್ನು ಜತನದಿಂದ ಎರಡು ತಿಂಗಳು ಕಾಪಾಡು. ಅದರಲ್ಲಿರುವ ದ್ರವ ಆರಿಹೋದ ನಂತರ ಅದನ್ನು ನಾಶಪಡಿಸು. ಆದರೆ ಯಾವುದೇ ಕಾರಣಕ್ಕೂ ಅದರಲ್ಲಿರುವ ಕೀಟಗಳು ಭೂಮಿಗೆ ಸೇರದಂತೆ ಎಚ್ಚರವಹಿಸು. ಇನ್ನೆರಡು ದಿನಗಳಲ್ಲಿ ನನ್ನ ಬಂಧನವಾಗಿ ಮೂರನೇ ದಜರ್ೆಯ ಶಿಕ್ಷೆ ನನಗೆ ಕಾದಿತ್ತು. ಹಾಗಾದಲ್ಲಿ ಈ ನನ್ನ ಜೈವಿಕ ಕೀಟಾಣುಗಳು ಮಹತ್ವಾಕಾಂಕ್ಷಿ ರಾಕ್ಷಸರ ಕೈ ಸೇರಿ ಅನಾಹುತವಾಗುತ್ತದೆ. ನನ್ನೆಲ್ಲಾ ಸಂಶೋಧನೆಗಳನ್ನೂ ನಾಶಪಡಿಸಿದ್ದೇನೆ ಈ ಎರಡು ಬಗೆಯ ಕೀಟ ನಾಶವಾಗಲು ಇನ್ನೆರಡು ತಿಂಗಳು ಬೇಕು. ಈ ಲೈಟರನ್ನು ಭದ್ರವಾಗಿಡು. ಇದರಲ್ಲಿರುವ ಕೀಟಗಳು ಉಕ್ಕು ಮತ್ತು ಸಿಮೆಂಟುಗಳನ್ನು ಕೊರೆದು ತಿಂದು ಬಿಡುತ್ತವೆ. ರಕ್ತ ಬೀಜಾಸುರನಂತೆ ಶೀಘ್ರವಾಗಿ ಹರಡುತ್ತದೆ. ಇದರ ವಿರುದ್ಧ ವತರ್ಿಸುವ ಯಾವುದೇ ಸೂತ್ರ ಇಷ್ಟರವರೆಗೆ ಸಂಶೋಧನೆಯಾಗಿಲ್ಲ. ಯಾವ ಕಾರಣಕ್ಕೂ ಅದು ಭೂಮಿಯನ್ನು ಸೇರಬಾರದು. ಈ ಪತ್ರವನ್ನು ಸುಟ್ಟುಬಿಡು. ಉಯಿಲಿನೊಂದಿಗೆ ಊರಿಗೆ ಹೋಗಿ ಬಿಡು. ನಿನಗೆ ಒಳ್ಳೆಯದಾಗಲಿ. ಅಣ್ಣ ಅತ್ತಿಗೆಯರ ಕೊನೆಯ ಸಿಹಿ ಮುತ್ತುಗಳನ್ನು ಈ ಪತ್ರದೊಂದಿಗೆ ಇಟ್ಟಿದ್ದೇನೆ....
ಪತ್ರ ಓದಿಮುಗಿದ ಕೂಡಲೇ ಅದನ್ನು ಲೈಟರಿನಿಂದ ಸುಟ್ಟು ಬಿಟ್ಟಿದ್ದೇನೆ. ಲಕೋಟೆ ಎತ್ತಿ ವಿಮಾನ ಹತ್ತಿ ನೇರವಾಗಿ ನನ್ನ ಊರಿಗೆ ಹೊರಟು ಬಿಟ್ಟಿದ್ದೆ. ಅನಂತರ... ಅನಂತರ ನನ್ನ ಬಂಧನವಾಯಿತು..." ರಾಮ್ಸ್ ಸುಮ್ಮನಾದ.
ನಡೆದು ಹೋದ ಭೀಕರ ಪ್ರಮಾದದ ಅರಿವಾದ ಮಿಲಿಟರಿ ಅಧಿಕಾರಿ ಇದುವರೆಗೆ ಭದ್ರವಾಗಿದೆ ಎಂದು ಭಾವಿಸಿದ ಕೊಠಡಿಯ ಕಾಂಕ್ರೀಟುಗೋಡೆಯ ಕಡೆಗೆ ದಿಟ್ಟಿಸಿದ. ಅದರಲ್ಲಿ ಸಣ್ಣಗೆ ಮೂಡಿದ ಬಿರುಕು ಆತನಿಗೆ ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ಅದೇ ಕಪ್ಪು ಕೀಟಾಣುಗಳು ನಾಗರೀಕ ಪ್ರಪಂಚವನ್ನೇ ತಿಂದು ಬಿಡುವ ಗಡಿಬಿಡಿಯಿಂದ ಓಡಾಡುತ್ತಿದ್ದವು...
*****
No comments:
Post a Comment