'ಅವ್ನೇ ಅಗ್ಬೇಕಾ ನಾವ್ಯಾರೂ ಆಗಾಕಿಲ್ವಾ?'
ಆ ಬ್ಯಾಂಕಿಗೆ ಬೋರ ಖಾಯಂ ಗಿರಾಕಿ. ವಾರಕ್ಕೆರಡು ಬಾರಿ ಬ್ಯಾಂಕ್ ಮೆಟ್ಟಲೇರದಿದ್ರೆ ಆಯಪ್ಪನಿಗೆ ನಿದ್ದೇನೇ ಹತ್ತೋಲ್ಲ. ಬ್ಯಾಂಕಿನ ಹಸನ್ಮುಖಿ ವ್ಯಕ್ತಿ ತುಕಾರಾಮನ ಬಳಿ ಬೋರಂಗೆ ಯಾವಾಗಲೂ ಕೆಲ್ಸ. ಬೇರೆ ಯಾರ ಹತ್ರಾನೂ ಮಾತಾಡದ ಬೋರ ತುಕರಾಮನ ಕೈಯಾಗೆ ಪಾಸು ಪುಸ್ತಕ ಕೊಟ್ಟು ಪಿಸ ಪಿಸ - ಕಿಸ ಕಿಸ ಅಂತಾ ಮಾತಾಡುದನ್ನು ಉಳಿದ ಸಿಬ್ಬಂದಿಗಳ ಓರೆ ಗಣ್ಣಿನಿಂದ ನೋಡ್ತಿದ್ರು. ಈಯಪ್ಪನಿಗೆ ತುಕಾರಾಮನೇ ಆಗ್ಬೇಕಾ ನಾವ್ಯಾರೂ ಆಗಾಕಿಲ್ಲವಾ ಅಂತಾ ಅವ್ರಿಗೆ ಅಸಮಾಧಾನ ಬೇರೆ. ಬೇರೆ ಸಿಬ್ಬಂದಿಗಳ ಕಂಡ್ರೆ ಬೋರ ಹುಣಸೀ ಹಣ್ಣು ತಿಂದಂತೆ ಮುಖ ಹುಳಿ ಹುಳಿ ಮಾಡೋದೂ ಉಂಟು. ಹಂಗಿರುವಾಗ ಉಳಿದೋರೆಲ್ಲಾ ಇಂವ ಯಾವಾಗ ನಮ್ಮ ಕೈಗೆ ಸಿಕ್ಕಿ ಬೀಳ್ತಾನೆ ಅಂತ 'ಉರುಳು ಹಿಡಿದು ಕಾದಂಗೆ' ಕಾಯ್ತಿದ್ರು.
ಅದ್ಕೂ ಒಂದು ಕಾಲ ಬಂತು. ತುಕಾರಾಮ ಅದೇಕೋ ಹದಿನೈದು ದಿನ ರಜಾ ಬರ್ದು ಹೋದ ದಿನವೇ ಬೋರ ಆ ಬ್ಯಾಂಕಿನ ಮೆಟ್ಟಿಲು ಹತ್ತಿದ. ವಾಡಿಕೆಯಂತೆ ತುಕಾರಾಮನ ಸೀಟಿನ ಹತ್ರ ಬಂದು ನೋಡ್ತಾನೆ ಆ ಸೀಟಿನಾಗೆ ಪೈಸೆ ಪೈಸೆಗೂ ಬ್ರಹ್ಮ ಗಂಟು ಬಿಗಿಯೋ ಪಿಟ್ಟಾಸಿ ಪಿತಾಮಹ ಪರಮಯ್ಯ ವಕ್ಕರಿಸಿಕೊಂಡಿದ್ದ. ಪರಮಯ್ಯ ಬೋರನ್ನು ನೋಡಿಯೂ ನೋಡದಂತೆ ಮಾಡಿ ಬಾರೀ ತುತರ್ಿನಲ್ಲಿರುವಂತೆ ಕೆಲ್ಸ ಮಾಡ ತೊಡಗಿದ. 'ತುಕಾರಾಮಪ್ಪನೋರು ಇಲ್ವಾ' ಅಂತ ಬೋರ ಮೂರನೇ ಬಾರಿ ಕೇಳ್ದಾಗ. ಓ ಅವ್ರಾ ಈಗ ಬರ್ತಾರೆ ಕೂತ್ಕೋ ಅಂದ ಒಳಗೊಳಗೇ ನಗುತ್ತಾ ಪರಮಯ್ಯ. ಬೋರ ಕಾದು ಕುಂತ ಮಧ್ಯಾಹ್ನ ಆದ್ರೂ ತುಕಾರಾಮ ಪತ್ತೆ ಇಲ್ಲ. ರಜೆ ಹಾಕಿದಾತ ಅದೆಲ್ಲಿಂದ ಬರಬೇಕು?. 'ನಾಳೆ ಬತ್ತೀನಿ' ಅಂತ ಬೋರ ಹೊರ ನಡೆದ. ಪರಮಯ್ಯ ಉಳಿದ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಬೋರನ್ನ ಬೈರಾಸ್ ಮಾಡಿದ್ದಕ್ಕೆ ಬೀಗಿದ್ದೇ ಬೀಗಿದ್ದು.
ಮರುದಿನ ತಪ್ಪದೆ ಹತ್ತು ಗಂಟೆಗೆ ಬೋರ ಬ್ಯಾಂಕಿನೆದುರು ಹಾಜರಾದ. 'ತುಕಾರಾಮ ಇವತ್ತು ರಜಾ ನಾಳೆ ಬಾ' ಅಂದ ಪರಮಯ್ಯ. ಹಿಂಗೆ ಐದಾರು ದಿನ ನಡೀತು. ಬೋರ ದಿನಾ ಬರೋದು ಅವನ್ನ ಪರಮಯ್ಯ ಏನೋ ಹೇಳಿ ಕಳ್ಸೋದು. ಅಂವ ಹೋದ ನಂತರ ಪಿಸ ಪಿಸ ನೆಗಾಡೋದನ್ನು ತನ್ನ ಚೇಂಬರಿಂದಲೇ ನೋಡಿದ ಮ್ಯಾನೇಜರ್ರಿಗೆ ಏನೋ ಎಡವಟ್ಟು ಆಗುತ್ತಿದೆ ಅನ್ನಿಸಿತು. ಮರುದಿನ ಬೋರ ಪರಮಯ್ಯ ಸೀಟು ಬಳಿ ನಿಂತ ಕೂಡ್ಲೆ ಮ್ಯಾನೇಜರ್ರು ಅಲ್ಲಿಗೇ ಬಂದು ಬಿಟ್ರು. 'ಏನು ಬೋರಣ್ಣಾ ದಿನಾ ಬರ್ತೀರೀ ಹೋಗ್ತೀರಿ ಏನ್ಕತೆ' ಅಂತ ವಿಚಾರಿಸಿದ್ರು. 'ಬೋರ ಏನಿಲ್ಲ ಸ್ವಾಮೀ ನಂಗೆ ತುಕಾರಾಮಪ್ಪನೋರ ಹತ್ರ ಕೆಲ್ಸ ಐತೆ ನಾಳೆ ಬರ್ತಾರೆ ನಾಳೆ ಬರ್ತಾರೆ ಅಂತ ಇವ್ರು ಹೇಳವ್ರೆ ಅಂಗೆ ದಿನಾ ಬರ್ತಾ ಇದ್ದೀನಿ' ಅಂದ ಬೋರ. 'ತುಕಾರಾಮ ಹದಿನೈದು ದಿನ ರಜಾ ಅಲ್ರೀ ಮತ್ಯಾಕ್ರೀ ನಾಳೆ ಬರ್ತಾರೆ ಅಂತಾ ಹೇಳ್ತೀರ್ರೀ. ಅವ್ರ ಕೆಲ್ಸ ಏನೂಂತ ಮಾಡಿ ಕೊಡ್ರಿ ಮತ್ತೆ' ಮ್ಯಾನೇಜರ್ ಪರಮಯ್ಯನ ಕಡೆ ನೋಡುತ್ತಾ ಹೇಳೀದ್ರು. ಪರಮಯ್ಯ ಇಂಗು ತಿಂದ ಮಂಗನಂತಾದ. 'ಅದೇನು ಕೆಲ್ಸ ಹೇಳ್ರೀ ನಿಮ್ಗೆ ಆ ತುಕಾರಾಮನೇ ಆಗ್ಬೇಕಾ ನಾವ್ಯಾರೂ ಆಗೊಲ್ವಾ?' ಪರಮೇಶಿ ಸಿಡುಕಿದ.
'ಬೇಡ್ರಿ ಅವ್ರೇ ಬರ್ಲಿ' ಅಂತಂದ ಬೋರ. 'ಅವ್ರು ಇನ್ನಾರು ದಿವ್ಸ ಬರೋಲ್ಲ ಇವರೆಲ್ಲರ ಕೈಲಿ ಕೆಲ್ಸ ಮಾಡೋಕೆ ಮನಸ್ಸಿಲ್ಲದಿದ್ರೆ ನಾನು ಮಾಡಿ ಕೊಡ್ತೀನಿ ಬೋರನ್ನಾ ಅದೇನಾಗ್ಬೇಕು ಹೇಳಿ' ಮ್ಯಾನೇಜರ್ ಬೋರನ ಹೆಗಲು ಸವರುತ್ತಾ ನುಡಿದರು.
'ಅದೇನಿಲ್ಲಾ ಸ್ವಾಮೀ. ತುಕಾರಾಪ್ಪನೋರು ನಂಗೆ ಅಗತ್ಯಕ್ಕೆ ಆವಾಗಾವಾಗ ಇನ್ನೂರು - ಮುನ್ನೂರು ಸಾಲ ಕೊಡ್ತಿದ್ರು ಎರಡು ಮೂರು ದಿನದೊಳಗೆ ವಾಪಾಸು ಕೊಡ್ತಿದ್ದೆ ಬಡ್ಡಿ ಗಿಡ್ಡಿ ಏನೂ ಇರ್ತಿರ್ಲಿಲ್ಲ. ಮೊನ್ನೆ ಮನೆಯಾಗ ಹೆಂಡ್ತಿಗೆ ಉಸಾರಿಲ್ಲಾಂತ ಐನೂರು ರೂಪಾಯಿ ತೆಕ್ಕೊಂಡಿದ್ದೆ. ಅಂಗೆ ಅದನ್ನು ವಾಪಾಸು ಮಾಡೋಣಾಂತ ಬಂದೆ. ಈಯಪ್ಪಾ ನಾಳೆ... ನಾಳೆ ಅಂತಿದ್ರು ಅಷ್ಟೆ' ಅಂದಾಗ ಎಂಜಲು ಕೈನಾಗೆ ಕಾಗೆ ಓಡಿಸದ ಪಿಟ್ಟಾಸಿ ಪರಮಯ್ಯ ಬೋರನ್ನ ಕೆಕ್ಕರಿಸಿ ನೋಡಿದ.
Thursday, February 21, 2008
Subscribe to:
Post Comments (Atom)
No comments:
Post a Comment