(ಬಂಟರವಾಣಿ ಮುಂಬಯಿ ಇದರ ಸುವರ್ಣ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾದ ಕತೆ)
`ಊರು ಹೋಗುತ್ತೆ ಕಣೇ... ನೀಲಾ...
``ಊರು ಹೋಗುತ್ತೆ...
ಆ ಮನೆಯ ಜಗುಲಿಯಿಂದ ರಾತ್ರಿಯ ನೀರವತೆಯನ್ನು ಬೇದಿಸಿಕೊಂಡು ಕ್ರಿಮಿ ಕೀಟಗಳ ಹಿಮ್ಮೇಳಗಳೊಂದಿಗೆ ಸ್ವರವೊಂದು ಕೇಳಿ ಬರುತ್ತಿತ್ತು.
`ಊರು ಹೋದ್ರೂ `ಊರು` ಅದು ಹೇಗೆ ಹೋಗುತ್ತದೆ... ನೀಲಾ ಅಜ್ಜ-ಪಿಜ್ಜನ ಕಾಲದಿಂದ ಇರೋ ದೈವದ `ಊರಿನ ತಳವನ್ನು ಯಾರು ನೋಡಿದ್ದಾರೆ... ಅದು ಕಾರ್ನಿಕದ ಕೆರೆ ಕಣೇ ನೀಲಾ...
ಊರು ಹೋಯಿತು
`ಊರು ಹೋಗುತ್ತೆ ಕಣೇ... ನೀಲಾ...
``ಊರು ಹೋಗುತ್ತೆ...
ಆ ಮನೆಯ ಜಗುಲಿಯಿಂದ ರಾತ್ರಿಯ ನೀರವತೆಯನ್ನು ಬೇದಿಸಿಕೊಂಡು ಕ್ರಿಮಿ ಕೀಟಗಳ ಹಿಮ್ಮೇಳಗಳೊಂದಿಗೆ ಸ್ವರವೊಂದು ಕೇಳಿ ಬರುತ್ತಿತ್ತು.
`ಊರು ಹೋದ್ರೂ `ಊರು` ಅದು ಹೇಗೆ ಹೋಗುತ್ತದೆ... ನೀಲಾ ಅಜ್ಜ-ಪಿಜ್ಜನ ಕಾಲದಿಂದ ಇರೋ ದೈವದ `ಊರಿನ ತಳವನ್ನು ಯಾರು ನೋಡಿದ್ದಾರೆ... ಅದು ಕಾರ್ನಿಕದ ಕೆರೆ ಕಣೇ ನೀಲಾ... ಕಾರ್ನಿಕದ ಕೆರೆ... ಅದಕ್ಕೆ ತಳ ಎಂಬುದಿಲ್ಲ ಕಣೇ... ಈ ಪಂಚಾತಿಕೆಯವರಿಗೆ ಮಂಡೆ ಸರಿ ಉಂಟಾ... ಎಲ್ಲರೂ ಊರು ಬಿಡುತ್ತಾರಂತೆ... ದುಡ್ಡು ತೆಗೆದುಕೊಳ್ಳುತ್ತಾರಂತೆ ನೀಲಾ... ಊರು ಹೋಗುತ್ತದಂತೆ....
ನಡು ರಾತ್ರಿ ಕಳೆದ ನಂತರ ಆ ಧ್ವನಿ ಕ್ಷೀಣವಾಗಿ ಜೀರುಂಡೆ ಕ್ರಿಮಿ ಕೀಟಗಳ ಸದ್ದು ಮೇಲುಗೈ ಪಡೆಯಿತು.
ಮರುದಿನ ಬೆಳಕು ಹರಿಯುತ್ತಿದ್ದಂತೆ ಆ ಮನೆಯಲ್ಲಿ ಚಟುವಟಿಕೆ ಕಂಡು ಬರತೊಡಗಿತ್ತು.
ನಿತ್ಯ ಕರ್ಮ ತೀರಿಸಿ ನೀಲಮ್ಮನ ಮುಂದೆ ಕುಳಿತ ದೇವಪ್ಪ `ನೀಲಾ ಊರು ಹೋಗುತ್ತದಂತೆ ಅಂದ.
ಊರು ಹೋದ್ರೆ ಹೋಗಲಿ? ನೀವ್ಯಾಕೆ ಹಗಲು ರಾತ್ರಿ ಊರು ಹೋಗುತ್ತೆ ಊರು ಹೋಗುತ್ತೆ ಅಂತ ಚಿಂತೆ ಮಾಡ್ಕೊಂಡು ಕೂತಿದ್ದೀರಿ. ಮೂರು ಮಕ್ಕಳು ಉಪಾಸ ಬೀಳುವುದು ಬೇಡಾಂತ ನಾನು ಗಾಣದೆತ್ತಿನಂತೆ ಒಂದು ಬೆಳಗ್ಗೆಯಿಂದ ಹೊತ್ತು ಅಡ್ಡಾಗುವವರೆಗೆ ದುಡಿದು ದುಡಿದು ಸೊಂಟದಲ್ಲಿ ಬಲ ಇಲ್ಲದೆ ಹೇಗಾದ್ರೂ ನೆಗರಿಕೊಂಡು ಮನೆಗೆ ಬಂದು ಬಿದ್ರೆ ನೀವು ಒಂದು ಬೆಳಿಗ್ಗೆಯಿಂದ ಊರು ಸುತ್ತಿ ಅದೆಲ್ಲೆಲ್ಲೋ ಬುಟ್ಟಿಚಾಕ್ರಿ ಮಾಡಿಕೊಂಡು ಯಾರ್ಯಾರೋ ಕೊಟ್ಟ ಮೂರ್ನಾಕು ಕಾಸು ಗಡಂಗಿನ ತೊಟ್ಟೆಗೆ ಹಾಕಿ ಕಣಿ, ತೋಡು, ಗದ್ದೆಯಲ್ಲೆಲ್ಲಾ ಉರುಳಾಡಿ ಪಿಲಿಗೊಬ್ಬು ಮಾಡಿಕೊಂಡು ಬರ್ತೀರಲ್ಲಾ ನಿಮ್ಗೆ ಏನಾದ್ರೂ ಮಂಡೆಯಲ್ಲಿ ಚೂರಾದ್ರೂ ಬೊಂಡು ಉಂಟಾ? ನಮ್ಮ ಮಕ್ಕಳಿಗೆ ಏನಾದ್ರೂ ಶಾಲೆ ಗೀಲೆ ಅಂತ ಕಲಿಸ್ಬೇಕು ಅಂತಾ ಯೋಚನೆ ಉಂಟಾ? ಆ ಚೆನ್ನಣ್ಣನನ್ನು ನೋಡಿ. ಹೇಗೆ ಬೆಳಿಗ್ಗಿಂದ ಸಂಜೆವರೆಗೆ ಸೌದೆ ಒಡೆದು, ತೆಂಗು-ಕಂಗು ಏರಿ ಇಳಿದು. ದುಡ್ಡಿಗೆ ದುಡ್ಡು ಮಾಡ್ತಾನೆ. ಮೊನ್ನೆ ಅವನ ಹೆಂಡ್ತಿ ಪೇಟೆಯ ಬಂಗಾರದ ಕೊಟ್ಟಿಗೆಯಲ್ಲಿ ಕೊತ್ತಂಬರಿ ಸರ ಗುದ್ದಿಸಿಕೊಂಡ್ಳು. ನನ್ನದೂ ಉಂಟು ನೋಡಿ ಇದೊಂದು ಮೋನ್ಮಾಲೆ ಅದೂ ಒಪ್ಪದ್ದು. ಆ ಚೆನ್ನಣ್ಣನ ಬುದ್ದಿ ನಿಮ್ಗೆ ಏಳು ಜನ್ಮ ಬಂದ್ರೂ ಬರೋದಕ್ಕಿಲ್ಲ... ನಿಮ್ಗೆ ಬೆಳಿಗ್ಗಿಂದ ಸಂಜೆ ವರೆಗೂ ದುಡಿದ್ರೂ ಈ ಊರಲ್ಲಿ ಒಂದೈವತ್ತು ರೂಪಾಯಿ ಯಾರಾದ್ರೂ ಕೊಡ್ತಾರ? ಅಲ್ಲಾ ನೀವು ತೆಗೋಳ್ತೀರಾ?... ಊರಂತೆ ಊರು. ಹೋದ್ರೆ ಹೋಗ್ಲಿ ಈ ಊರಿನ ಸನಿ ಸಂತಾನ ಸತ್ತು ಮಣ್ಣುತಿಂದು ಹೋಗ್ಲಿ. ನಾವು ಎಲ್ಲಿಯಾದ್ರೂ ಗಡಂಗು ಇಲ್ಲದ ಊರಿಗೆ ಹೋಗಿಬಿಡುವ. ಈ ಊರಲ್ಲಿ ನಿಮಗೆ ಕೆಲಸಕ್ಕೆ ತಕ್ಕ ಸಂಬಳ ಕೇಳಲು ಗೊತ್ತಿಲ್ಲ. ಕೊಡಲು ಅವರಿಗೆ ಗೊತ್ತಿಲ್ಲ.
ಅಲ್ಲಾ ಕಣೇ ಊರು ಹೋಗುತ್ತೆ ಹೋಗುತ್ತೆ ಅಂತಾರಲ್ಲಾ ಎಲ್ಲಿಗೆ ಹೋಗುತ್ತೇ?
ದೇವಪ್ಪ, ನೀಲಮ್ಮನ ವಟಗುಟ್ಟುವಿಕೆ ಕಿವಿಗೆ ಕೇಳಿಸಲೇ ಇಲ್ಲ ಎಂಬಂತೆ ಮುಂಭಾಗದಲ್ಲಿ ನಾಲ್ಕು ದೋಸೆ ಹಾಕಿದ್ದ ತಟ್ಟಿಕುಡ್ಪಿನ ಬಳಿ ಇದ್ದ ಅಲ್ಯೂಮಿನಿಯಂ ತಟ್ಟೆಯಲ್ಲಿದ್ದ ಬೂತಾಯಿ ಸಾರನ್ನು ನಡುಬೆರಳಿನಿಂದ ಅದ್ದಿ ತುಟಿಗಿಟ್ಟು ಚಪ್ಪರಿಸುತ್ತಾ ನುಡಿದ.
ಎಲಾ ಕತೆಯೇ.... ಪುನಾ ಅದೇ ಮಾತಾಡ್ತೀರಲ್ಲಾ.... ಅದೆಲ್ಲಿಗೋ ಏಳು ಕಡಲಾಚೆಗೆ ಹೋಗುತ್ತದಂತೆ. ಊರು ಹೋಗುತ್ತದೆ ಊರು ಹೋಗುತ್ತದೆ ಅಂತ ಹೇಳ್ಕೊಂಡು ಹತ್ತು ಹದಿನೈದು ವರ್ಷವಾಯಿತು ಈಗ ಮೂರ್ನಾಕು ದಿವಸದಿಂದ `ಪಠಪಾರಿಕೊಂಡು ಇದ್ದೀರಿ. ರಾತ್ರೀಂತ ಇಲ್ಲಾ ಹಗಲೂಂತ ಇಲ್ಲಾ... ಕನಸಿನಲ್ಲೂ ಅದೇ ಹೇಳ್ತಾ ಇದ್ದೀರಿ. ಈಗ ನನ್ಗೇ ಕೇಳ್ತಾ ಇದ್ದೀರಲ್ಲಾ ಊರು ಎಲ್ಲಿಗೆ ಹೋಗುತ್ತೇಂತ. ಅದೆಲ್ಲಿಗೆ ಅದರಪ್ಪನ ಮನೆಗೆ ಹೋಗುತ್ತದಾ? ಈ ಊರಿನ ದೊಡ್ಡ ದೊಡ್ಡ ಮುಂಡಾಸಿನವರಿಗೆ ಒಂದು ಭ್ರಾಂತಿ.... ನೀಲಮ್ಮ ದೊಡ್ಡ ಲೋಟೆಯಲ್ಲಿ ಚಹಾವನ್ನು ಸುರ್ರೆಂದು ಸುರಿದು ದೇವಪ್ಪನ ಎದುರು ಕುಕ್ಕಿದಳು.
ಅಲ್ಲ ನೀಲ ಇನ್ನು ಮೂರು ತಿಂಗಳೊಳಗೆ ನಾವೆಲ್ಲಾ ಗಾಡಿ ಕಟ್ಟಬೇಕಂತೆ. ನಿನ್ನೆ ಪೇಟೆಯ ಶಾಲೆಯಲ್ಲಿ ಪಂಚಾತಿಕೆ ನಡೀತು. ಊರಿನವರೆಲ್ಲ ದುಡ್ಡು ತೆಗಿತಾ ಇದ್ದಾರಂತೆ ಯಾರಿಗೂ ಊರು ಬೇಡ ಅಂತೆ. ಊರೆಲ್ಲಾ ಸಮತಟ್ಟು ಆಗುತ್ತದಂತೆ. ಯಾರಿಗೂ ಬೇಡ ಆದ್ರೇನು ಆ ಗುಡ್ಡದವ್ನು ಬಿಡ್ತಾನಾ. ರಾಣಿ ಕಾಲದಲ್ಲಿ ಬರಗಾಲ ಬಂದು ಊರಿನವರೆಲ್ಲಾ ಊರು ಬಿಟ್ಟು ಹೋಗೋ ಮೊದ್ಲು ಅವ್ನ ಎದುರು ನಿಂತು ಕೈಮುಗ್ದು ಕಣ್ಣೀರು ಹಾಕಿದಾಗ ಅವ್ನು ತನ್ನ ಖಡ್ಗ ಊರಿ ಕೆರೆ ಮಾಡಿ ಜನರಿಗೆ ನೀರು ಕುಡಿಸಲಿಲ್ವಾ. ಅದೇಗೆ ಆ ಗುಡ್ಡದವ್ನು ಹೋಗುತ್ತಾನೆ. ಅದೇಗೆ ತಾನು ಊರಿದ ಊರನ್ನು ಸಮತಟ್ಟು ಮಾಡ್ಲಿಕ್ಕೆ ಬಿಟ್ಟಾನು? ಊರು ಹೋಗ್ಲಿ ನಾವೆಲ್ಲಾದ್ರೂ ಹೋಗೋಣ ಅಂತ ಮಾತಾಡ್ತಿಯಲ್ಲಿ ನಿಂಗೊಂಚೂರಾದ್ರು ಬುದ್ದಿ ಉಂಟಾ ಮಾರಾಯ್ತಿ. ದೇವ್ರಿಲ್ಲದ ಊರುಂಟು ಗಡಂಗಿಲ್ಲದ ಊರುಂಟಾ ನಿನ್ನ ಕರ್ಮ? ದೇವಪ್ಪ ಮೀಸೆಯಡಿಯಲ್ಲಿ ನಗುತ್ತಾ ದೋಸೆ ಚೂರು ಸಾರಲ್ಲಿ ಅದ್ದಿ ಬಾಯಿಗಿಟ್ಟ.
ನನ್ನ ಕರ್ಮವಂತೆ ನನ್ನ ಕರ್ಮ. ಈ ಜನ್ರು ಮಾಡೋ ಕರ್ಮಕ್ಕೆ ನಾಲ್ಕು ಕೈಯ ನಾರಾಯಣ ದೇವ್ರೂ ಹೆದರಿ ಓಡಿ ಹೋಗ್ಯಾನು. ಇನ್ನು ಭೂತವಂತೆ, ದೈವವಂತೆ. ಈ ನರ ಭೂತದೆದುರು ನಿಮ್ಮ ಗುಡ್ಡದವ್ನೂ ಇಲ್ಲ, ಬೈಲಿನವ್ನೂ ಇಲ್ಲ ನೀಲ ಸಿಡುಕಿದಳು.
ಹಾಗಾದ್ರೆ ಊರು ಸಮತಟ್ಟು ಆಗುತ್ತಾ? ಗುಡ್ಡದವ್ನು ಕಾರ್ನಿಕ ತೋರ್ಸಿ ಮಾಡಿದ ಕೆರೆ ಮಣ್ಣನಡಿಗೆ ಬೀಳುತ್ತಾ...? ದೇವಪ್ಪನ ಮುಖದಲ್ಲಿ ತುಸು ಭೀತಿ ಇಣುಕಿತು.
ನೀಲ ಪಕ ಪಕನೆ ನಕ್ಕಳು. `ಯಾರು ಹೇಳಿದ್ರಿ ನಿಮ್ಗೆ ಆ ಗುಡ್ಡದವ್ನು ಖಡ್ಗ ಊರಿ ಕೆರೆ ನಿರ್ಮಿಸಿದ್ದು ಅಂತ... ಹಾಗಲ್ಲರೀ ಅದು. ಊರಿನವರೆಲ್ಲಾ ಸೇರಿ ಉಪಯೋಗಿಸೊ ಕೆರೆಗೆ ಊರುಕರೆ ಅಂತ ಹೆಸ್ರು ಬಂತು. ದೇವಸ್ಥಾನದ ಭಟ್ರಿಗೆ ಏನಾದರೊಂದು ಬೇಕಲ್ಲ. ಅದಕ್ಕೆ ಖಡ್ಗ ಊರಿದ್ದು, ಕತ್ತೀಲಿ ಕಡ್ದದ್ದು ಅಂತ ಹರಿಕತೆ ಮಾಡ್ತಾರೆ. ಅದನ್ನು ನೀವು ನಂಬ್ತೀರಿ. ಅಲ್ಲಾ... ಒನಕೆಯಂತೆ ಮಳೆ ಭೂಮಿಗೆ ಬಡಿಯೋ ಊರಿನಲ್ಲಿ ಬರಗಾಲ ಅಂತ ಬರೂದುಂಟಾ... ಬಂದದ್ದುಂಟಾ... ಬಂಗಾರದ ಬೆಳೆ ಬೆಳೆಯುವ ಪರಶುರಾಮ ಸೃಷ್ಟಿಗೆ ಬರ ಬರುದಿಲ್ಲಾಂತ ಆಟದಲ್ಲಿ ಹೇಳಿದ್ದು ಕೇಳಿಲ್ವಾ...?
`ಆಹಾಹಾ... ನಿನ್ನ ಬುದ್ದಿಯೇ ಊರೆಲ್ಲಾ ಸೇರಿ ಹೇಳಿದ್ರೂ ನೀನು ಮಾತ್ರ ಏನೇನೋ ತಲೆ ಕೆಟ್ಟವಳಂತೆ ಮಾತಾಡ್ತಿಯಲ್ಲ. ಭೂತದೆದುರು ಏನು ನಿನ್ನ ಅಡ್ಡ ಸವಾಲು. ಅದಕ್ಕೆ ಹೇಳೋದು ಈ ಹೆಂಗಸರ ಬುದ್ದಿ ಮೊಣಕಾಲ ಕೆಳಗೆ ಅಂತಾ ದೇವಪ್ಪ ಧ್ವನಿ ಎತ್ತರಿಸಿದ.
ಹೌದು.. ಹೌದು... ನಿಮ್ಮ ಗಂಡಸರ ಬುದ್ದಿ ಯಾವಾಗ್ಲೂ ನೆತ್ತಿಯಲ್ಲಿ. ಅದ್ಕೆ ನೀವು ನೆತ್ತಿಯವರೆಗೂ ತೊಟ್ಟೆ ಸುರಿದುಕೊಳ್ಳೋದು... ನೀವು ನಿಮ್ಮ ತೊಟ್ಟೆ ಖಚರ್ಿಗೆ ಮತ್ತೆ ಸಂಜೆ ಎರಡು ಮೀನಿನ ಬಾಲಕ್ಕೆ ದುಡಿಯೋದು ಬಿಟ್ರೆ ಮತ್ತೇನು ಮನೆಗೆ ತಂದು ಹಾಕಿದ್ದೀರಿ? ನಾನು ನಟ್ಟಿ-ಕೈ ಅಂತ ಹೇಳ್ಕೊಂಡು ಅಕ್ಕಿ ತಂದು ಹಾಕೋದ್ರಿಂದ ಪುಟ್ಟ ಮಕ್ಕಳ ಹೊಟ್ಟೆಗೆ ಏನಾದ್ರೂ ದಕ್ಕುತ್ತದೆ. ಹೆಂಗಸರ ಬುದ್ದಿಯಂತೆ... ಹೆಂಗಸರ ಬುದ್ದಿ... ನೀಲ ಮತ್ತಷ್ಟು ಧ್ವನಿ ಎತ್ತರಿಸಿದಳು.
ದೇವಪ್ಪ ತಣ್ಣಗಾದ.
ಗುಡ್ಡದವ್ನು ನಮಗೇನು ಕಮ್ಮಿ ಮಾಡಿದ್ದಾನೆ ನೀಲ. ನೀನು ದುಡೀತಿಯಾ... ಇಲ್ಲಾಂತ ನಾನು ಹೇಳಿದ್ನಾ... ದುಡಿದು ದುಡಿದು ಅಕ್ಕಿ ಮುಡಿ ನನ್ನಲ್ಲೇ ಕಟ್ಟಿಸಿ ಅಟ್ಟಕ್ಕೆ ಹಾಕಿಸ್ತಿಯಾ. ನಮಗೆ ಅನ್ನಕ್ಕೆ ಎಂದಾದ್ರೂ ಬರ ಬಂದದ್ದುಂಟಾ? ಶಿವಣ್ಣರನ್ನು ನೋಡು ಹಲವಾರು ಮುಡಿ ಗದ್ದೆ ಇದ್ರೂ. ಆಟಿ ಅಖೇರಿಯ ಜಡಿ ಮಳೆಗೆ ಅಕ್ಕಿ ಇಲ್ಲ ನೀಲಾ ಒಂದು ಮುಡಿ ಕೊಡು. ಬೇಸಾಯ ಮುಗಿದ ನಂತ್ರ ಕೊಡ್ತೇನೆ ಅಂತ ನಿನ್ನೆದುರು ಹೇಳಿಲ್ವಾ? ನಾವು ಯಾರತ್ರಾದ್ರೂ ಹಾಗೆ ಕೇಳಿದ್ದುಂಟಾ? ಅವ್ರು ಹೇಳಿದಾಕ್ಷಣ ನೀನು ಅಕ್ಕಿ ಮುಡಿ ಹೊರಳಿಸಿ ಕೊಟ್ಟಿಲ್ವಾ. ಸುಮ್ಮನೆ ಅದಿಲ್ಲಾ... ಇದಿಲ್ಲಾ ಅಂತ ಯಾಕೆ ಹೇಳ್ತಿ. ನನ್ಗೇನು ಆ ತೊಟ್ಟೆ ಸಹವಾಸ ಹಾಳಾದ್ದು ಅಂಟಿ ಬಿಡ್ತು... ಸಂಜೆಗೆ ಒಂದೆರಡು ಇಲ್ಲಾಂದ್ರೆ ಆಗೋದೇ ಇಲ್ಲ.
ದೇವಪ್ಪನ ದೈನ್ಯ ಧ್ವನಿ ನೀಲಮ್ಮ ಮನಸ್ಸನ್ನು ಕರಗಿಸಿಬಿಟ್ಟಿತು.
ಚೇ... ಕುಶಾಲಿಗೆ ಹೇಳಿದೆ ಕಣ್ರೀ. ಮತ್ತೆ ನಿಮ್ಮ ಮೇಲೆ ನನ್ಗೆ ಎಲ್ಲಾದ್ರೂ ಕೋಪಾಂತ ಆದದ್ದುಂಟಾ? ನಿನ್ನೆ ನಡುರಾತ್ರಿಯಿಂದ ಊರು ಹೋಗುತ್ತೆ... ಊರು ಹೋಗುತ್ತೆ ಅಂತ ನಿಮ್ಮ `ಪಠಪಾರಿ ಕೇಳಿ ಕೇಳಿ ಸಾಕಾಗಿ ಬಿಟ್ಟಿತು. ಈ ಊರು, ಈ ಬೇಸಾಯ ಯಾರಿಗೆ ಬೇಕು? ನಾವೆಲ್ಲಾ ಚಿಕ್ಕದಿರುವಾಗ ಶಿವಣ್ಣನ ಅಪ್ಪ ದೂಮಣ್ಣ ಈ ಊರಿಗೆಲ್ಲಾ ಯಜಮಾನರು. ಅವರ ಗತ್ತೇನು. ದೌಲತ್ತೇನು. ಅವ್ರು ಕೊಡೋ ನ್ಯಾಯ. ಹೇಳೋ ನೀತಿ ಎಲ್ಲಕ್ಕೂ ಒಂದು ಕ್ರಮಾಂತ ಇತ್ತು. ಈಗ ಅದೇ ಭೂಮಿ. ಅದೇ ಬೆಳೆ ನ್ಯಾಯ ನೀತಿ ಒಂದೂ ಇಲ್ಲ. ಪಾಪ ಶಿವಣ್ಣನ ಪಾಡೇನು? ಗದ್ದೆ ಕೆಲಸಕ್ಕೆ ಜನ ಇಲ್ಲ. ಮನೆಯವ್ರು ಎಲ್ಲಾ ಇವ್ರ ತಲೆಗೆ ಕಟ್ಟಿ ಬೊಂಬಾಯಿ, ಕೊಯ್ಟಾ ಅಂತ ಹೋಗಿ ಅವರವ್ರ ಪಾಡು ನೋಡಿಕೊಂಡು ನಾಲ್ಕು ಕಾಸು ಮಾಡ್ಕೊಂಡು ಬಿಟ್ಟಿದ್ದಾರೆ. ಮಗಳು ದೂರದ ಕುಡ್ಲದಲ್ಲಿ ಮಾವನ ಮನೆಯಲ್ಲಿ ಶಾಲೆ ಕಲೀತಿದ್ದಾಳೆ. ಗದ್ದೆಯಲ್ಲಿ ಬೆಳೆದದ್ದೆಲ್ಲಾ ಕೆಲಸದವರಿಗೆ ಅಳೆದು ಕೊಡುದಕ್ಕಾಯಿತು. ಕೆಲಸದವರ ಮನೆಯಲ್ಲಾದರೂ ಮಳೆಗಾಲದ ಅಖೇರಿಗೆ ಅಕ್ಕಿ ಉಂಟು ಈ ಭೂಮಿ ಇದ್ದವರ ಮನೆಯ ಕೋಳಿ ಮರಿಗೆ ನಿಂಗಲ್ಗೂ ಗತಿ ಇಲ್ಲದ ಪರಿಸ್ಥಿತಿ. ಈ ಊರು ಯಾರಿಗೆ ಬೇಕು?
ಹೌದು ನೀಲಾ ಊರು ಹೋದ್ರೆ ನಾವೆಲ್ಲಿಗೆ ಹೋಗೋದು. ನಮಗೆ ಯಾರು ದಿಕ್ಕು. ಆವಾಗ ಮೂರು ಕೋಲು ಊರಿಕೊಂಡು ದುರ್ಬೀನು ನೋಡುತ್ತಾ ತೆಂಗು-ಕಂಗು ಅಂತ ಲೆಕ್ಕ ತೆಗೆಯೋರು ಬಂದಾಗ ಊರಿನವರೆಲ್ಲಾ ಅರ್ಜಿಕೊಡು ದ್ಯಾಪ... ಅರ್ಜಿ ಕೊಡು ದ್ಯಾಪ ಅಂತ ಅಂದ್ರೆ ನಾನೇನೂ ಕೊಡಲೇ ಇಲ್ಲ. ಅರ್ಜಿ ಕೊಟ್ಟವರಿಗೆಲ್ಲಾ ಈಗ ಎಲ್ಲೋ ಗುಡ್ಡೆಯಲ್ಲಿ ಜಾಗ. ಹಣ ಎಲ್ಲಾ ಸಿಗುತ್ತಂತೆ. ನಾವೇನು ಮಾಡೋಣ....? ದೇವಪ್ಪ ನುಡಿದ.
ಹೌದು ನಿಮಗೆ ಪಾಪ ಪುಣ್ಯ ಜಾಸ್ತಿ ಆಯ್ತು. ರೇಶನ್ ಕಾಡರ್ು ನಂಬ್ರ ಬರೆದು ಖಾಲಿ ಕಾಗದಕ್ಕೆ ಶಿವಣ್ಣ ಹೆಬ್ಬೆಟ್ಟು ಒತ್ತಿಸಿ ಕೊಂಡೋಗಿದ್ದಾರಲ್ಲಾ ಅವ್ರಲ್ಲಿ ಕೇಳಿದ್ರೆ ನಮಗೂ ಜಾಗ, ಹಣ ಅಂತಾ ಸಿಕ್ಕೀತು... ಪಾಪ ಶಿವಣ್ಣ ಇಲ್ಲಾಂತ ಅನ್ಲಿಕ್ಕಿಲ್ಲ. ಆದರೆ ಅದೆಲ್ಲಾ ನಮಗೆ ಯಾಕೆ ಬೇಕು? ಇದೇನು ನಮ್ಮ ಅಪ್ಪನ, ಅಜ್ಜನ ಜಾಗವಾ? ಮನೆಯಾ? ನನ್ನ ರೆಟ್ಟೆ ಗಟ್ಟಿ ಇದ್ರೆ ಎಲ್ಲಾದರು ದುಡಿದು ಮಕ್ಕಳ ಹೊಟ್ಟೆ ತುಂಬಿಸಿಯೇನು? ಮಕ್ಕಳು ದೊಡ್ಡೋರಾದ್ರೆ ಮತ್ತೆ ನಮಗೇನು ಕಡಿಮೆ. ಈ ಲೋಕದಲ್ಲಿ ಎಲ್ಲಾದ್ರೂ ನಮಗೆ ಜಾಗ ಸಿಕ್ಕೀತು... ನೀಲಮ್ಮ ತಟ್ಟಿ ಕುಡ್ಪಿಗೆ ಮತ್ತೆರಡು ದೋಸೆ ಹಾಕಿದಳು.
ಹೌದು ಕಣೇ ನೀಲ ಯಾರ್ಯಾರದು ನಮಗ್ಯಾಕೆ? ಆದ್ರೂ ಶಿವಣ್ಣನಲ್ಲಿ ಒಂದು ಮಾತು ಕೇಳಿ ಬಿಡುವ. ಮತ್ತೆ ಗುಡ್ಡದವ್ನು ಇಟ್ಟ ಹಾಗೆ ಆಗುತ್ತದೆ... ದೇವಪ್ಪ ದೋಸೆ ತಿಂದು ಚಹಾ ಹೀರಿ ಎದ್ದು ಬಿಟ್ಟ.
ಮನೆ ಕೆಲಸ ಮುಗಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ನೀಲಮ್ಮ ಶಿವಣ್ಣನ ಮನೆ ಅಂಗಳಕ್ಕೆ ಇಳಿದಳು. ಕೋಣಗಳಡಿಗೆ ಹಾಕಲು ತರಗೆಲೆ - ಸೊಪ್ಪು ತರಲು ಉಂಟು ನೀಲಾ ಬೆಳಿಗ್ಗೆ ಬಂದುಬಿಡು ಅಂತ ಶೀಲಕ್ಕ ಹೇಳಿದ್ದರಿಂದ ನೀಲ ನೇರವಾಗಿ ಹಟ್ಟಿಗೆ ನುಗ್ಗಿ ಕುಕರ್ಿಲ್ನೊಳಗೆ ಹಿಡಿಸೂಡಿ ಹಾಕಿ ಬೆನ್ನಿಗೇರಿಸಿಕೊಂಡು ಮನೆ ಬಾಗಿಲಿಗೆ ನಡೆದು ಶೀಲಕ್ಕೋರೇ ಕತ್ತಿ ಕೊಡಿ ಗುಡ್ಡೆಗೋಗುತ್ತೀನಿ ಅಂತಂದಳು.
ಮನೆಯೊಳಗಿಂದ ಹೊಸ ಮುಖವೊಂದು ಹೊರಬಂದು ಓ ನೀಲುವಾ ಹೇಗಿದ್ದಿಯಾ? ಅಂತ ಕೇಳಿತು. ಅಯ್ಯಾ... ನಳಿನಕ್ಕ ಯಾವಾಗ ಬಂದ್ರಿ... ನೀಲಮ್ಮ ಸಂಭ್ರಮದಿಂದ ಉದ್ಘರಿಸಿದಳು.. ನಳಿನಕ್ಕನನ್ನು ಅನುಸರಿಸಿ ಗಂಡಸೊಂದು ಮನೆಯಿಂದ ಹೊರಬಂತು. ಯಾರಕ್ಕಾ ಇದು ಅಂತ ಕೇಳಿತು. ಇದು ನಮ್ಮ ಒಕ್ಕೆಲಿನ ತನಿಯನ ಮಗಳು. ನೀಲು ಅಲ್ವಾ? ತನಿಯನ ಅಳಿಯ ದೇವಪ್ಪನಿಗೇ ಇವಳನ್ನು ಕೊಟ್ಟು ಮದ್ವೆ ಮಾಡಿದ್ದಲ್ವಾ. ಗುರ್ತು ಸಿಗ್ಲಿಲ್ವಾ...? ಅಂದರು. ನಳಿನಕ್ಕ. ಓ... ಹೋ. ನೀನಾ ಮಾರಾಯ್ತಿ. ದ್ಯಾಪ ಹೇಗಿದ್ದಾನೆ ಅಂದಿತು ಆ ಗಂಡಸು. ಓ ಇದು ಶಿವಣ್ಣನ ಅಣ್ಣ ಗೋವಿಂದ ಅಂತ ನೀಲಮ್ಮ ಗುರುತು ಹಚ್ಚಿದಳು. ಅಷ್ಟೊತ್ತಿಗೆ ಶೀಲಕ್ಕ ಕತ್ತಿ ಹಿಡಿದುಕೊಂಡು ಹೊರಬಂದರು. ಇಕಾ ಕತ್ತಿ ತೆಕೋ. ಹನ್ನೊಂದು ಗಂಟೆಗೆ ಚಾ ಹಿಡ್ಕೊಂಡು ಬರ್ತೇನೆ... ಶೀಲಕ್ಕನ ಧ್ವನಿ ಏಕೋ ಕುಂದಿದಂತಿತ್ತು. ನೀಲಮ್ಮ ಶೀಲಕ್ಕನ ಮುಖ ದಿಟ್ಟಿಸಿದಳು. ಏನೋ ವೇದನೆ... ನಿದ್ದೆ ಗೆಟ್ಟ ಮುಖ... ಆಯ್ತಕ್ಕಾ ಅನ್ನುತ್ತಾ ನೀಲಮ್ಮ ಗುಡ್ಡದ ಹಾದಿ ಹಿಡಿದರೂ. ಆಕೆಯ ಮನಸ್ಸು ನಳಿನಕ್ಕನ ದರ್ಪದ ಧ್ವನಿಯನ್ನು ಮೆಲುಕು ಹಾಕುತಿತ್ತು. ಇಷ್ಟರವರೆಗೆ ಶೀಲಕ್ಕ ನಮ್ಮನ್ನು ಒಕ್ಕೆಲಿನವರು ಎಂದು ಹೇಳಿದ್ದಿಲ್ಲ ನಳಿನಕ್ಕ ಒಕ್ಕೆಲನ್ನೂ ಇನ್ನೂ ಬಿಟ್ಟಿಲ್ವಾ ಅಂತ ಅನ್ನಿಸಿತು.
ಯೋಚಿಸುತ್ತಲೇ ಗುಡ್ಡಕ್ಕೆ ಹೋದ ನೀಲಮ್ಮ ಗೋಳಿಮರದ ಬುಡದ ತರಗೆಲೆಗಳನ್ನು ಬರಬರನೆ ಗುಡಿಸುತ್ತಾ ರಾಶಿ ಹಾಕತೊಡಗಿದಳು.
ನೀಲಮ್ಮಾ ಚಾ ಕುಡಿ ಬಾ ಅನ್ನುವ ಸ್ವರ ಕೇಳಿದ ಕೂಡಲೇ ಹೋ ಆಗ್ಲೇ ಹನ್ನೊಂದು ಗಂಟೆ ಆಗೋಯ್ತಾ ಅಂತ ಅಂದುಕೊಂಡಳು.
ಬಾಳೆ ಎಲೆಗೆ ಇಡ್ಲಿಯ ಹೋಳುಗಳನ್ನು ಹಾಕಿ ತೆಂಗಿನಕಾಯಿ ಚಟ್ನಿಯನ್ನು ಸುರಿದು ಎತ್ತಿ ನೀಲಮ್ಮನ ಕೈಗಿತ್ತು, ದೊಡ್ಡ ಲೋಟೆಯಲ್ಲಿ ಚಹಾವನ್ನೂ ಮುಂದಿಟ್ಟಳು ಶೀಲ. `ಇಷ್ಟೊಂದು ಇಡ್ಲಿಯಾ? ಇದನ್ನು ತಿಂದರೆ ಮಧ್ಯಾಹ್ನದ ಊಟ ಹೇಗೆ ಮಾಡೋದು ಎಂದು ಅಂದುಕೊಳ್ಳುತ್ತಾ, ಶೀಲನ ಕೈ ಬೆರಳುಗಳನ್ನೇ ನೋಡುತ್ತಾ `ಶೀಲಕ್ಕನ ಕೈ ಅಂದರೆ ಕೈಯೇ. ತಾನು ಮಾಡುವ ಕೆಲಸದ ಗಳಿಗೆ ಗಳಿಗೆಗಳನ್ನು ಲೆಕ್ಕ ಹಿಡಿದು ಒಂದು ಹಿಡಿ ಅಕ್ಕಿಯೂ ಬಾಕಿ ಮಾಡದೆ ಅಳೆದು ಕೊಡುವ ಶೀಲಕ್ಕನ ಕೈ ಹೊಟ್ಟೆಗೆ ಕಡಿಮೆ ಕೊಟ್ಟೀತೇ? ಎಂದು ಯೋಚಿಸಿದಳು ನೀಲಮ್ಮ.
ಪರವೂರಿನವರೆಲ್ಲಾ ಬಂದಿದ್ದಾರೆ ಏನೋ...? ನೀಲಮ್ಮ ಶೀಲಕ್ಕನ ಮುಖ ನೋಡುತ್ತಾ ನುಡಿದಳು. ಇದ್ದಕ್ಕಿದ್ದಂತೆ ಶೀಲನ ಕಣ್ಣುಗಳಲ್ಲಿ ಬಳಬಳನೆ ನೀರು ಸುರಿಯಲಾರಂಭಿಸಿತು. ನಮ್ಮ ಜಾಗ ಎಲ್ಲಾ ಹೋಗುತ್ತದಲ್ಲಾ. ಹಾಗೆ ಇವತ್ತು ಪಂಚಾತಿಕೆ. ಅವರ ಅಕ್ಕ. ಅಣ್ಣಂದಿರು, ತಂಗಿ ಎಲ್ಲಾ ಬಂದಿದ್ದಾರೆ. ನಮಗೆ ಪರಿಹಾರಾಂತ ಸಿಗುತ್ತಲ್ಲಾ ಅದರನ್ನು ಪಾಲು ಮಾಡ್ಲಿಕ್ಕೆ ಅವರೆಲ್ಲಾ ಬಂದಿದ್ದಾರೆ.... ಶೀಲಕ್ಕನ ದುಃಖ ಕಂಡ ನೀಲಮ್ಮನಿಗೆ ಇಡ್ಲಿ ರುಚಿಯಾಗಲೇ ಇಲ್ಲ. ಮೆಲ್ಲಗೆ ಎಲೆ ಮಡಚಿ ಬದಿಗಿಟ್ಟಳು. ಈಗ ಹಸಿವಿಲ್ಲ ಮತ್ತೆ ತಿನ್ನುತ್ತೇನಕ್ಕಾ ಅಂತಂದಳು. ಶೀಲ ಎದ್ದು. ಮಧ್ಯಾಹ್ನ ಊಟಕ್ಕೆ ಬಾ ಅನ್ನುತ್ತಾ ಮನೆಯ ಹಾದಿ ಹಿಡಿದಳು. ಹಿಂದೆಲ್ಲಾ ಚಿಗರೆ ಮರಿಯಂತೆ ಕಾಲು ಹಾಕುತ್ತಿದ್ದ ಶೀಲ ಇಂದೇಕೋ ಸೋತ ಕಾಲುಗಳನ್ನು ಊರಿದಂತೆ ಅನಿಸಿತು. ನೀಲ ಹಾಗೇ ನಿಂತ ನೋಡಿದಳು. ಅವಳ ಕಣ್ಣುಗಳು ಮಂಜಾದವು.
ಹೊತ್ತು ನೆತ್ತಿಗೇರುತ್ತಿದ್ದಂತೆ ರಾಶಿ ಮಾಡಿದ ತರಗೆಲೆಗಳನ್ನು ಕುಕರ್ಿಲ್ಗೆ ತುಂಬಿಸಿ ಹಟ್ಟಿ ಹಿಂಬದಿಯ ಅಂಗಳಕ್ಕೆ ತಂದು ಹಾಕತೊಡಗಿದಳು ನೀಲಮ್ಮ. ಹಾಗೇ ಮನೆಯ ಕಡೆ ಕಣ್ಣು ತಿರುಗಿಸಿ ಕಿವಿಯಾನಿಸಿದಳು. ಮನೆಯಳಗಿಂದ ಅದೇನೋ ಮಾತುಗಳು ಕೇಳಿಬರುತ್ತಿದ್ದವು. ಮತ್ತೆರಡು ಬಾರಿ ತರಗೆಲೆ ತಂದು ಹಾಕುತ್ತಿದ್ದಂತೆ ಮನೆಯೊಳಗೆ ಬಿಸಿ ಬಿಸಿ ವಾಗ್ಯುದ್ಧವಾಗತೊಡಗಿತ್ತು. ಕೊನೆಯದಾಗಿ ತುಂಬಿದ ಕುಕರ್ಿಲ್ ತಂದು ಹಾಕುತ್ತಿದ್ದಾಗ ಮನೆಯೊಳಗಿಂದ ದೇವಪ್ಪನ ಹೆಸರು ಕೇಳಿ ಬರತೊಡಗಿತು. ನೀಲಮ್ಮ ಹಾಗೇ ಹಟ್ಟಿಯೊಳಗಿನ `ಬೈಪನೆಯ ಕಂಬಕ್ಕೆ ಒರಗಿ ಕುಳಿತು ಮನೆಯಿಂದ ಕೇಳಿಬರುತ್ತಿದ್ದ ಮಾತುಗಳನ್ನುಆಲಿಸತೊಡಗಿದಳು.
ನನ್ನಪ್ಪ ದೂಮಣ್ಣನಿಗೆ ಐದು ಜನ ಮಕ್ಕಳು. ಆರನೇ ಮಗ ಇದ್ದ ಅಂತ ನಂಗೆ ಗೊತ್ತಿಲ್ಲ. ಆ ದ್ಯಾಪ ಏನು ನಮ್ಮ ತಂದೆಗೆ ಹುಟ್ಟಿದ್ದಾ...? ಅವನಿಗ್ಯಾಕೆ ಜಾಗ ಬಿಡಬೇಕು? ಅವನೇನು ಡಿಕ್ಲರೇಶನ್ ಕೊಟ್ಟಿದ್ದಾನಾ? ಒಂದು ರೇಶನ್ ಕಾಡರ್್ ಇದೆ ಅಂತ ಅರ್ಧ ಎಕ್ರೆ ಅವನಿಗೆ ಬಿಟ್ಟ ನಿನ್ನ ಮಂಡೆಯಲ್ಲಿ ಏನು ಸೆಗಣಿ ತುಂಬಿದೆಯಾ?. ಯಾರನ್ನು ಕೇಳಿ ಹೀಗೆ ಮಾಡಿದೆ. ನಾವೆಲ್ಲಾ ಸತ್ತು ಹೋಗಿದ್ದೇವಾಂತ ತಿಳ್ಕೊಂಡಿಯಾ?....
ನೀಲಮ್ಮ ಕಲ್ಲಿನಂತೆ ಕುಳಿತು ಕೇಳತೊಡಗಿದಳು.
ಹಾಗಲ್ಲಣ್ಣ... ಅವ ನಮ್ಮಪ್ಪನ ಕಾಲದಿಂದ ಆ ಜಾಗದಲ್ಲಿ ಇದ್ದನಲ್ಲ. ಕರೆದಾಗ ಬಂದು ಬುಟ್ಟಿ ಚಾಕ್ರಿ ಮಾಡಿದನಲ್ಲ. ಸಂಬಳ ಇಷ್ಟು ಅಂತ ಹೇಳಲಿಲ್ಲ. ಕೊಟ್ಟದ್ದನ್ನು ತೆಗೆದುಕೊಂಡ. ಪಾಪ ಪುಣ್ಯ ನೋಡಿ ಡಿಕ್ಲರೇಶನ್ ಕೊಡಲಿಲ್ಲ. ಅವನನ್ನು ಹಾಗೇ ಬಿಡೋಕಾಗುತ್ತಾ. ಅವ ದೇಶಾಂತರ ಹೋಗುವ ಹಾಗೆ ಮಾಡೋದು ನ್ಯಾಯಾನಾ?. ಅವ ಇರುವ ಜಾಗ ಅವನಿಗೇ ಇರ್ಲಿ ಅಂತ ಪರಿಹಾರದಲ್ಲಿ ಅವನ ಹೆಸರು ಸೇರಿಸಿದ್ದೀನಿ ಒಂಚೂರು ಜಾಗ ಹೋದ್ರೆ ಏನು ಮಹಾ? ಏನಿಲ್ಲ ಒಂದು ನಾಕು ತೆಂಗಿನ ಗಿಡ ಅಷ್ಟೆ...
ಮುಚ್ಚಾ ಬಾಯಿ ಆವಾಗದಿಂದ ಅದನ್ನೇ ಹೇಳ್ತಾ ಇದ್ದಿಯಲ್ಲ. ಅವನೇನು ನಮ್ಮ ಸಂಬಂಧಿಕನಾ, ನಮ್ಮ ಬಂಧುವಾ ಹೋಗ್ಲಿ ನಮ್ಮ ಜಾತಿಯವ್ನಾ? ಒಂಚೂರು ಅಂತೆ ಒಂಚೂರು. ದುಡ್ಡೆಷ್ಟಾಯಿತು? ಲೆಕ್ಕ ಹಾಕು. ನಿನ್ನ ಪಾಲಿಗೆ ಬಂದದ್ದರಲ್ಲಿ ಅವನಿಗೆ ಏನು ಬೇಕೋ ಅದನ್ನು ಕೊಡು ನಮ್ಮ ಅಭ್ಯಂತರ ಇಲ್ಲ. ಇನ್ನು ತೋಟ. ಗದ್ದೆ, ಗುಡ್ಡ ಎಲ್ಲ ಸರಿಯಾಗಿ ಐದು ಪಾಲಾಗಬೇಕು. ನಳಿನಕ್ಕ ಅಬ್ಬರಿಸಿದರು.
`ಅದೇಗಾಗುತ್ತದೆ ನಳಿನಕ್ಕಾ? ನೀನು ಬೊಂಬಾಯಿಗೆ ಹೋಗುವಾಗ ಒಂದು ತುಂಡಾದ್ರೂ ತೋಟ ಅಂತ ಇತ್ತಾ. ನಾಲ್ಕು ಎಕ್ರೆ ತೋಟ ಮಾಡಿದ್ದು ನಾನು. ಬಾವಿ ಕೂಡಾ ನಾನೇ ತೋಡಿಸಿದ್ದು. ಎಷ್ಟು ಕಷ್ಟ ಪಟ್ಟಿದ್ದೀನಿ ಗೊತ್ತಾ? ತೋಟದ ಪರಿಹಾರದಲ್ಲಿ ಯಾರಿಗೂ ಪಾಲಿಲ್ಲ ಉಳಿದ ಗುಡ್ಡ, ಗದ್ದೆಯಲ್ಲಿ ನೀವು ಪಾಲು ತೆಗೆದುಕೊಳ್ಳಿ. ತೋಟವೊಂದು ನನಗೆ ಬಿಡಿ ಶಿವಣ್ಣನ ಕಳಕಳಿಯ ಧ್ವನಿ ಕೇಳಿ ನೀಲಮ್ಮ ಕರುಳು ಚುರುಕ್ಕೆಂದಿತು.
ನೋಡು ಶಿವ ನೀನು ಯಾರ ಜಾಗದಲ್ಲಿ ಯಾರನ್ನು ಕೇಳಿ ತೋಟ ಮಾಡಿದಿ? ಅದರ ಫಲದಲ್ಲಿ ನಮಗೇನಾದರೂ ಪಾಲು ಕೊಟ್ಟಿದ್ಯಾ? ನೀನೇ ಇಷ್ಟರವರೆಗೆ ತಿಂದದ್ದಲ್ವಾ. ಅಲ್ಲಿಗೆ ಸರಿಯಾಯ್ತು. ಈಗ ಎಲ್ಲವನ್ನೂ ಸರಿಯಾಗಿ ಐದು ಪಾಲು ಮಾಡಿಬಿಡುವಾ. ಏನು ಸುಮಿತ್ರಾ ಏನು ಹೇಳುತ್ತಿ? ಅಂದರು ಗೋವಿಂದಣ್ಣ.
ಹೌದಣ್ಣಾ ಹಾಗೇ ಆಗ್ಲಿ ಅವ್ರೂ ಹಾಗೇ ಹೇಳಿದ್ದಾರೆ ಅಂದಳು ಶಿವಣ್ಣನ ಚಿಕ್ಕ ತಂಗಿ ಸುಮಿತ್ರ.
ಏನು ಸುಮಿತ್ರಾ ಹಾಗಂತಿಯಾ? ಅಪ್ಪ ತೀರಿಹೋದ ಬಳಿಕ ನಿನ್ನ ಮದುವೆ ಆದದ್ದು ನೆನಪಿದ್ಯಾ ನಿನಗೆ. ವರದಕ್ಷಿಣೆ, ಬಂಗಾರ ಎಲ್ಲಾ ನಾನೇ ತಂದು ಹಾಕಿದ್ದು. ಈ ನಿನ್ನ ಅಣ್ಣ ಅಕ್ಕಂದಿರು ಬೊಂಬಾಯಿ, ಕೊಯ್ಟಾದಿಂದ ತಿರುಗಿ ಕೂಡಾ ನೋಡಿಲ್ಲ. ಈಗ ಜಾಗ ಹೋಗುತ್ತದೆ, ದುಡ್ಡು ಸಿಗುತ್ತದೆ ಅಂತ ಎಲ್ಲಾ ಓಡಿ ಬಂದಿದ್ದಾರೆ. ಈ ಗೋವಿಂದಣ್ಣ ಊರು ಬಿಟ್ಟು ಹೋದವ ಒಮ್ಮೆಯಾದರೂ ಊರಿಗೆ ಬಂದಿದ್ದಾನಾ ಕೇಳು? ನಿನ್ನ ಮದುವೆಗೆ ಸೊಸೈಟಿಯಿಂದ ತೆಗೆದ ಸಾಲ ತೀರಿದ್ದು ಕಳೆದ ವರ್ಷ. ನೀನೂ ಅವರೊಂದಿಗೆ ಸೇರಿ ಹಾಗೇ ಅಂತಿಯಾ? ಶಿವಣ್ಣನ ತಾಳ್ಮೆ ತಪ್ಪಿದ ಧ್ವನಿ ನೀಲಮ್ಮನ ಕಿವಿಗೆ ಅಪ್ಪಳಿಸಿತು.
ನಾನು ಬೇಡ ಅಂದ್ರೆ ಅವ್ರು ಕೇಳ್ಬೇಕಲ್ಲಾ. ಸರಿ ಪಾಲು ಆಗ್ಬೇಕು ಅಂತಾನೆ ಹೇಳಿದ್ದಾರೆ ಸುಮಿತ್ರ ತಣ್ಣಗೆ ನುಡಿದಳು.
ಮತ್ತೆ ಅದ್ರಲ್ಲಿ ಕೆಲಸ ಅಂತಾ ಸಿಗುತ್ತಲ್ಲಾ. ಕೆಲಸ ಯಾರಿಗೆ ಅಂತ ಸಿಗೋದು? ಅವ್ನಿಗೆ ಇವ್ನಿಗೆ ಅಂತಾ ಏನೂ ಬೇಡ ಅದಕ್ಕೆ ಏನು ಪರಿಹಾರ ಸಿಗುವುದೋ ಅದನ್ನು ಐದು ಪಾಲು ಮಾಡಿ ಬಿಡೋದ್ರಲ್ಲೇ ನ್ಯಾಯ ಇದೆ. ಏನು ಆಗದಾ? ಎಲ್ರೂ ಏನು ಹೇಳುತ್ತೀರಿ ಗೋವಿಂದಣ್ಣ ನುಡಿದರು.
ಹಾಗೇ ಆಗ್ಲಿ ಅಂತ ಸುಮಿತ್ರ, ನಳಿನಿ, ಚಿದಾನಂದ ನುಡಿದರು.
ದಯವಿಟ್ಟು ಆ ಕೆಲಸ ಒಂದನ್ನಾದರೂ ನನ್ನ ಮಗಳಿಗೆ ಸಿಗುವ ಹಾಗೆ ಮಾಡಿ ನಾನು ಈ ಊರಲ್ಲಿದ್ದು ಬೇಸಾಯ ಜಾಗ ನೋಡಿಕೊಂಡದ್ದಕ್ಕೆ ಅಷ್ಟಾದರೂ ಉಪಕಾರ ಮಾಡಿ ಶಿವಣ್ಣ ಗೋಗರೆದರು.
ನೀನು ಭೂಮಿ ನೋಡ್ಕೊಂಡು ಏನು ಉಪಕಾರ ಮಾಡಿದೆ? ದೊಡ್ಡ ದಾನಶೂರಕರ್ಣನಂತೆ ಒಕ್ಕಲಿನವರಿಗೆ ಪಾಲು ತೆಗೆಸಿಕೊಟ್ಟೆ. ನಿನ್ನಲ್ಲಿ ದುಡ್ಡು ಇದ್ರೆ ಎಲ್ಲಾ ಊರಿನವರ ಪಾಲಾಗುತ್ತದೆ. ಹಾಗೆ ನನಗೆ ಮಗಳಿಲ್ವಾ. ಗೋವಿಂದನಿಗಿಲ್ವಾ?.. ನಮ್ಮ ಹಿರಿಯರದು ಹಾಗೆಲ್ಲಾ ಒಬ್ಬೊಬ್ಬರ ಪಾಲಿಗೆ ಹೋಗಬಾರದು ಎಲ್ಲವೂ ಸರಿಯಾಗಿ ಪಾಲು ಆಗ್ಬೇಕು ನಳಿನಕ್ಕನ ದೊಡ್ಡ ಕಂಠ ನುಡಿಯಿತು.
ಅದು ಹೇಗೆ ಹಾಗೆ ಮಾಡ್ತೀರೋ ನೋಡೋಣ. ಮನೆ ನನ್ನ ಹೆಸ್ರಲ್ಲಿರೋದು. ರೇಶನ್ ಕಾಡರ್ು ನನ್ನದು. ಕೆಲಸ ನನ್ನ ಮಗಳಿಗೇ ಸಿಗೋದು. ಅದನ್ನು ಹ್ಯಾಗೆ ತಪ್ಪಿಸ್ತೀರಿ ಅಂತ ನಾನೂ ನೋಡ್ತೇನೆ ಶಿವಣ್ಣ ಕೆಂಡಾಮಂಡಲವಾಗಿ ಅಬ್ಬರಿಸಿದ ಧ್ವನಿ ನೀಲಮ್ಮನ ಕಿವಿಗೆ ಬಡಿಯಿತು.
ಮತ್ತೆ ವಾಗ್ಯುದ್ಧ ಆರಂಭವಾಯಿತು. ಎಲ್ಲರೂ ಏನೇನೋ ಮಾತಾಡತೊಡಗಿದರು. ಎಲ್ಲವೂ ಗೋಜಲು ಗೋಜಲು. ಇನ್ನೇನು ಕೈ-ಕೈ ಮಿಲಾಯಿಸುತ್ತದೆ ಅಂತ ಅನಿಸುತ್ತಿದ್ದಂತೆ ಏನೋ ಶಿವ ಭಾರೀ ಹಾರಾಡ್ತಿಯಾ. ಹಿರಿಯರ ಎದುರು ಹೇಗೆ ಮಾತಾಡ್ಬೇಕು ಅಂತ ಗೊತ್ತಿಲ್ಲಾ ನಿಂಗೆ. ದೇವರು ನಿನ್ನನ್ನು ನೋಡ್ಕೋತಾನೆ. ನೀನೇನಾದರೂ ಸರಿಯಾಗಿ ಪಾಲು ಮಾಡದೇ ಹೋದರೆ ಆ ಗುಡ್ಡದವ್ನ ಮೇಲೆ ಆಣೆ ಇದೆ.... ನಳಿನಕ್ಕನ ಗಟ್ಟಿ ಸ್ವರಕ್ಕೆ ಮನೆಯೊಳಗೆ ಕೆಲ ಕ್ಷಣ ನೀರವ ಮೌನ ಆವರಿಸಿಬಿಟ್ಟಿತು.
`ಗುಡ್ಡದವನ ಆಣೆಗೆ ಯಾರಾದರು ತಲೆ ಬಾಗದಿರುವುದುಂಟೇ ನೀಲಮ್ಮ ಮನದಲ್ಲೇ ಚಿಂತಿಸಿದಳು.
ಒಂದೆರಡು ನಿಮಿಷಗಳಲ್ಲೇ ಮನೆಯೊಳಗಿಂದ ಸದ್ದು ಕೇಳಿಸತೊಡಗಿತು. ಹಳೆ ಕಾಲದ ಕಲೆಂಬಿಯ ಬಾಗಿಲು ತರೆದಾಗ ಕಿರುಗುಟ್ಟುವ ಸದ್ದು. ದಭಾಲನೆ ಕಲೆಂಬಿಯ ಬಾಗಿಲನ್ನು ಹಾಕಿದ ಸದ್ದು...
`ತೆಗೊಳ್ಳಿ.. ಮನೆ... ಜಾಗ... ಎಲ್ಲದರ ದಾಖಲೆ ಪತ್ರ ಇದು. ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಿ ನನಗೇನೂ ಬೇಡ. ನನಗೇನೂ ಬೇಡ. ಶಿವಣ್ಣ ಬಿಕ್ಕಳಿಸುತ್ತಿದ್ದರು. ಟಪ್ ಟಪ್ ಏನೋ ಎಸೆದ ಸದ್ದು ಬಹುಶಃ ದಾಖಲೆ ಪತ್ರಗಳನ್ನು ಗೋವಿಂದಣ್ಣನ ಮುಂದೆ ಎಸೆದಿರಬೇಕು... ಮರುನಿಮಿಷದಲ್ಲಿ ಶಿವಣ್ಣ ಉಟ್ಟ ಬಟ್ಟೆಯಲ್ಲಿ ಹೊರಬಂದದ್ದನನ್ನು ಕಂಡು ನೀಲು ಗಾಬರಿಯಿಂದ ಎದ್ದು ನಿಂತಳು. ಕೆಂಪು ಬೈರಾಸಿನಲ್ಲಿ ಕಣ್ಣು ಮುಖ ಒರಸುತ್ತಾ ಚಪ್ಪಲಿ ಮೆಟ್ಟಿ ಶಿವಣ್ಣ ನಡೆದೇ ಬಿಟ್ಟರು. ಈಗ ಮನೆಯೊಳಗಿಂದ ಶೀಲಕ್ಕನ ಬಿಕ್ಕಳಿಕೆಯ ಧ್ವನಿ ಮಾತ್ರ.
ನೀಲಮ್ಮನ ದುಡಿದ ಹೊಟ್ಟೆಯ ಹಸಿವು ಮಾಯವಾಗಿತ್ತು. ಆಕೆ ತನ್ನ ಮನೆಯ ಕಡೆ ನಡೆದುಬಿಟ್ಟಳು.
ಕತ್ತಲಾಗುತ್ತಿದ್ದಂತೆ ಮಕ್ಕಳನ್ನು ಉಣಿಸಿದ ನೀಲಮ್ಮ ಗಂಜಿ ಕುಡಿದು ದೇವಪ್ಪನ ದಾರಿ ಕಾಯತೊಡಗಿದಳು. ರಾತ್ರಿಯಾಗುತ್ತಿದ್ದಂತೆ ಅನ್ನ, ಪದಾರ್ಥ ಬಡಿಸಿ ಮುಚ್ಚಿಟ್ಟು, ಹೊರ ಜಗಲಿಯಲ್ಲಿ ಚಾಪೆ, ದಿಂಬು, ಹೊದಿಕೆ ಇಟ್ಟು, ಬಾಗಿಲು ಎಳೆದು ಮಲಗಿ ಬಿಡುತ್ತಿದ್ದ ನೀಲಮ್ಮ ಇಂದು ಮಾತ್ರ ದೇವಪ್ಪ ಬಂದ ನಂತರವೇ ಮಲಗುವ ನಿಧರ್ಾರ ಮಾಡಿದ್ದಳು. ಯಾವಾಗಲೂ ತೂರಾಡುತ್ತಾ ಊರಿಗೆಲ್ಲಾ ಕೇಳಿಸುವಂತೆ ಮಾತನಾಡುತ್ತಾ ಏನೇನೋ ಹಾಡುತ್ತಾ ಬರುತ್ತಿದ್ದ ದೇವಪ್ಪ ಅಂದು ಮಧ್ಯರಾತ್ರಿಯಾದರೂ ಬರಲೇ ಇಲ್ಲ. ಮಧ್ಯರಾತ್ರಿ ಕಳೆದಿರಬೇಕು. ಹೊರಜಗಲಿಯಲ್ಲಿ ಹೊದಿಕೆ ಕೊಡವಿದ ಸದ್ದು ಕೇಳಿ ನೀಲಮ್ಮ ಬಾಗಿಲು ತೆಗೆದು ಹೊರಬಂದಳು. ದೇವಪ್ಪ ಮಲಗಿ ಹೊದಿಕೆ ಎಳೆದುಕೊಳ್ಳುತ್ತಿದ್ದ. ತನ್ನ ಬರವನ್ನು ಊರಿಗೆ ಸಾರಿ ಹೇಳುತ್ತಿದ್ದ ದೇವಪ್ಪ ಅಂದು ನಿಶ್ಯಬ್ದವಾಗಿ ಬಂದು ಊಟ ಕೂಡಾ ಮಾಡದೆ ಮಲಗಿದ್ದ.
ಏನ್ರೀ... ಶಿವಣ್ಣ ಏನಾದ್ರೂ ಸಿಕ್ಕಿದ್ರಾ ನೀಲಮ್ಮ ದೇವಪ್ಪನ ಬಳಿಬಂದು ಕುಕ್ಕರುಗಾಲಿನಲ್ಲಿ ಕುಳಿತಳು.
ಆಯ್ತು ಕಣೇ ನೀಲಾ ಎಲ್ಲಾ ಆಯ್ತು... ಇಷ್ಟರವರೆಗೆ ನೀನು ನನ್ನನ್ನು ಕುಡ್ಕಾ... ಕುಡ್ಕಾ ಅನ್ನುತ್ತಿದ್ದಿ. ಇವತ್ತು ಶಿವಣ್ಣ ನನಗಿಂತ ಹೆಚ್ಚು ಕುಡ್ದು ಕಾಮ್ತರ ಅಂಗಡಿ ಮುಂದೆ ಬಿದ್ದು ಬಿಟ್ಟಿದ್ರು.. ಏಳೋಕೆ ಶಕ್ತಿ ಇಲ್ಲದ ಅವ್ರನ್ನು ಹೇಗಾದ್ರೂ ಮಾಡಿ ಮನೆಗೆ ಕರೆತರುವಾಂತ ಇದ್ರೆ ಮನೆಗೆ ಬರೋದಕ್ಕೆ ಸುತರಾಂ ಒಪ್ಲಿಲ್ಲ... ಅವ್ರನ್ನ ಕಾಮ್ತರ ಜಗಲಿ ಮೇಲೆ ಮಲಗಿಸಿ ಬಂದುಬಿಟ್ಟೆ.... ಈ ತೊಟ್ಟೆ ಸಹವಾಸ ನೀಲಾ... ಏನಕ್ಕೇನೋ ಮಾಡಿ ಬಿಡುತ್ತೆ... ಆವರೆಗೆ ಸುಮ್ಮನಿದ್ದ ದೇವಪ್ಪನ ಬಾಯಿಗೆ ಕೋಲು ಹಾಕಿದಂತಾಗಿತ್ತು... ಆತ ಊರೆಲ್ಲಾ ಕೇಳಿಸುವಂತೆ ಬೊಬ್ಬಿರಿಯತೊಡಗಿದ. `ಗುಡ್ಡದವ್ನ ಎದುರು ಎದೆ ಸಟೆಸಿ ನಿಂತು ಮಯರ್ಾದೆ ಸ್ವೀಕರಿಸುತ್ತಿದ್ದ ಶಿವಣ್ಣ ಇಂದು ಬಿದ್ದು ಬಿಟ್ಟರು ಕಣೇ ನೀಲಾ... ಕಾಮತರ ಅಂಗಡಿಯ ಎದುರು ನೆಲಕ್ಕೆ ಅಂಗಾತ ಬಿದ್ದು ಬಿಟ್ಟರು... ಮೇಲಿನ ಬೈಲಿನ ಕಂಬಳದ ಕರೆಯಲ್ಲಿ ಕೋಣ ಓಡಿಸುತ್ತಾ ಒಂದು ಬಾರಿಯೂ ಹಗ್ಗ ಬಿಟ್ಟು, ಹಲಗೆ ಜಾರಿ ಕೆಸರಿಗೆ ಬೀಳದ ಶಿವಣ್ಣ ಇಂದು ಏಳಲಾಗದಂತೆ ಬಿದ್ದು ಬಿಟ್ಟರು.. ನೀಲಾ... ಬಿದ್ದು ಬಿಟ್ಟರು...
ನೀಲಮ್ಮ ಕಣ್ಣೀರು ಸುರಿಸುತ್ತಾ ಒಳಸೇರಿದಳು.
ಮನೆಯಿಂದ ಇಳಿದು ಹೋದ ಶಿವಣ್ಣ ಮತ್ತೆ ಮನೆಗೆ ಕಾಲಿಡಲಿಲ್ಲ. ನಳಿನಕ್ಕ, ಸುಮಿತ್ರ, ಚಿದಾನಂದ ಅವರವರ ಸಂಬಂಧಿಕರ ಮನೆಗೆ ಹೋಗಿಬಿಟ್ಟರು. ಗೋವಿಂದಣ್ಣ ನಗರದ ಹೋಟೇಲಿನಲ್ಲಿ ಬಾಡಿಗೆ ಕೋಣೆ ಹಿಡಿದರು. ಶೀಲಲ ಚಿಕ್ಕ ತಮ್ಮ ಶಿವಣ್ಣನ ಮನೆಗೆ ಬಂದು ಇರತೊಡಗಿದ. ದೇವಪ್ಪ ಮಾತ್ರ ಶಿವಣ್ಣ ಹೋದಲೆಲ್ಲಾ ಹಿಂಬಾಲಿಸಿ ಹೋಗುತ್ತಿದ್ದ. ಹಗಳಿರುಳೂ ಶಿವಣ್ಣ ಅಮಲೇರಿ ತೂರಾಡುತ್ತಿದ್ದ. ಆತನ ಕಣ್ಣುಗಳು ಹಳದಿಬಣ್ಣಕ್ಕೆ ತಿರುಗಿದವು. ಉಗುರ ತುದಿಗಳು ಅರಶಿನ ಕೊಂಬುಗಳಂತಾದವು. ಆತನ ದೇಹಕ್ಕೆ ಅರಶಿನ ಕಾಮಾಲೆ ಧಾಳಿಯಿಟ್ಟಿತು.
ಒಂದು ಬೆಳಿಗ್ಗೆ ಶಿವಣ್ಣನಿಗಾಗಿ ಎಲ್ಲೆಲ್ಲೋ ಹುಡುಕಾಡಿದ ಗೋವಿಂದಣ್ಣ ಶರಾಬು ಅಂಗಡಿ ಬಳಿಗೇ ಬಂದು ಶಿವಣ್ಣನಿಂದ ಯಾವುದೋ ಕಾಗದ ಪತ್ರಗಳಿಗೆ ಸಹಿ ಹಾಕಿಸಿ ಮಧ್ಯಾಹ್ನ ಕಳೆಯುತ್ತಿದ್ದಂತೆ ಮತ್ತೆ ಬಂದು ಒಂದು ಪ್ಲಾಸ್ಟಿಕ್ ಚೀಲತುಂಬಾ ಹಣದ ಕಂತೆಗಳನ್ನು ಕೊಟ್ಟು ಋಣ ತೀರಿಸಿ ಸಂಜೆಗೆ ಮುಂಬಾಯಿಯ ಬಸ್ಸು ಹತ್ತಿದರು.
ಅಂದು ಶಿವಣ್ಣನ ಬುದ್ದಿಯೇ ಸ್ವಾಧೀನದಲ್ಲಿರಲಿಲ್ಲ. ಹೊಟ್ಟೆ ತುಂಬಾ ಶರಾಬು ಕುಡಿದು ಮತ್ತಿನಲ್ಲಿ ತೂರಾಡತೊಡಗಿದ. ಪೇಟೆ ಇಡೀ ಕೇಳುವಂತೆ ಬೊಬ್ಬಿರಿಯತೊಡಗಿದ. ಬನ್ನಿ.... ಬನ್ನಿ. ದುಡ್ಡು... ಯಾರಿಗೆ ಬೇಕು... ತೆಕ್ಕೊಳ್ಳಿ..... ನಾನು ಕರ್ಣ.. ಮಹಾಭಾರತದ ಕರ್ಣ. ದಾನಶೂರಕರ್ಣ ಅನ್ನುತ್ತಾ ದುಡ್ಡಿನ ಕಟ್ಟುಗಳ ದಾರ ಕಡಿದು ತಲೆಯ ಮೇಲೆ ಸುರಿದುಕೊಳ್ಳತೊಡಗಿದ.
ಕಾಮತರ ಅಂಗಡಿ ಮುಂದೆ. ಐದ್ರೋಸ್ ಬ್ಯಾರಿಯ ಗೂಡಂಗಡಿಯ ಮುಂದೆ. ಸಂಕಪ್ಪಣ್ಣ ಸೆಲೂನಿನ ಮುಂದೆ. ಪೇಟೆಯ ಬಸ್ಸು ನಿಲ್ಲುವ ಕಟ್ಟೆಯ ಬಳಿ. ಎಲ್ಲೆಲ್ಲೂ ತಿರುಗಾಡಿ ಹಣವನ್ನು ಚೆಲ್ಲಾಡತೊಡಗಿದ.
ದೇವಪ್ಪ ಎಷ್ಟು ಸಮಾಧಾನಪಡಿಸಿದರೂ ಶಿವಣ್ಣ ಕೇಳಲೇ ಇಲ್ಲ. ದ್ಯಾಪ ನೀನು ... ನೀನು ದೂಮಣ್ಣನ ಆರನೇ ಮಗ.. ತಕೋ... ದುಡ್ಡು.. ನಿನಗೆಷ್ಟು ಬೇಕು ತಕೊ.... ಶಿವಣ್ಣ ನೋಟುಗಳನ್ನು ದೇವಪ್ಪನ ಮುಂದೆ ಬಿಸಾಡತೊಡಗಿದ.
ಶಿವಣ್ಣ ಹೋದಲ್ಲೆಲ್ಲಾ ಹಿಂಬಾಲಿಸಿದ ದೇವಪ್ಪ ನೋಟುಗಳನ್ನು ಒಂದೂ ಬಿಡದೆ ಹೆಕ್ಕಿ ಹೆಕ್ಕಿ ಬೈರಾಸಿನೊಳಗೆ ತುಂಬಿಸಿಕೊಳ್ಳುತ್ತಲೇ ಹೋದ. ತಡರಾತ್ರಿಯವರೆಗೂ ಶಿವಣ್ಣನ ಪಿಲಿಗೊಬ್ಬು ನಡೆಯುತ್ತಲೇ ಇತ್ತು. ಹಣವನ್ನೆಲ್ಲಾ ಚೆಲ್ಲಾಡಿದ ನಂತರ ಸುಸ್ತಾದ ಶಿವಣ್ಣ ಕಾಮತರ ಜಗಲಿಯಲ್ಲಿ ಕಾಲು ಚಾಚಿದ.
ದೇವಪ್ಪ ಅಂದು ಕುಡಿಯುವುದನ್ನೇ ಮರೆತು ಮನೆಯ ಕಡೆ ನಡೆದಿದ್ದ. ನೀಲಮ್ಮನನ್ನು ಎಬ್ಬಿಸಿ ಬೈರಾಸನ್ನು ಆಕೆಯ ಮುಂದಿಟ್ಟ.
ಚಿಮಿಣಿ ದೀಪದ ಬೆಳಕಿನಡಿಯಲ್ಲಿ ನೋಟುಗಳನ್ನು ಅಟ್ಟಿ ಮಾಡಿ ಗೋಣಿ ನಾರಿನಿಂದ ಕಟ್ಟಿ ದಿಂಬಿನಡಿ ಇಟ್ಟಳು ನೀಲಮ್ಮ.
ರಾತ್ರಿ ಇಡೀ ನಿದ್ದೆ ಬರದೇ ಒದ್ದಾಡಿದ ನೀಲಮ್ಮ ಮರುದಿನ ಚುಮು ಚುಮು ಬೆಳಕು ಹರಿಯುವಾಗಲೇ ಹಣದ ಕಟ್ಟಿನೊಂದಿಗೆ ಶೀಲಕ್ಕನ ಮನೆ ಹೊಕ್ಕಳು. ನರಪೇತಲದಂತಿದ್ದ ಶೀಲನ ಕಣ್ಣುಗಳಿಂದ ಈಗ ಕಣ್ಣೀರು ಸುರಿಯುತ್ತಿರಲಿಲ್ಲ. ಬೇಸಗೆಯ ಬಿರುಗಾಳಿಗೆ ಒಣಗಿಹೋದ ಕರೆಯಂತೆ ಆಕೆಯ ಕಣ್ಣುಗಳು ತಳ ಹಿಡಿದಿದ್ದವು.
ನೀಲಮ್ಮ ಹಣದ ಕಟ್ಟನ್ನು ಶೀಲನ ಎದುರು ಹಿಡಿದು ವಿಷಯವನ್ನೆಲ್ಲಾ ತಿಳಿಸಿ ಕಣ್ಣೀರು ಸುರಿಸಿದಳು. ನೀಲ... ನೀಲ.. ನೀನು ಈ ಮನೆಯ ಕೆಲಸದವಳಲ್ಲ ನೀಲ... ನೀನು ನನ್ನ ಒಡಹುಟ್ಟಿದ ತಂಗಿ ಎನ್ನುತ್ತಾ ನೀಲನನ್ನು ಅಪ್ಪಿ ಹಿಡಿದು ಗೋಳಾಡಿದಳು ಶೀಲ.
ಬೇಡಕ್ಕಾ ನಾನು ಕೆಲಸದವಳೇ... ನಾನು ತಂಗಿಯೂ ಅಲ್ಲ... ಅಕ್ಕನೂ ಅಲ್ಲ... ಈ ಅಕ್ಕ ತಂಗಿ.. ಅಣ್ಣ ತಮ್ಮಂದಿರ ಸಹವಾಸವೇ ಬೇಡ.. ನೀಲ ಅಳುತ್ತಾ ನುಡಿದಳು.
ಮುಂಜಾನೆ ಎದ್ದು ಕಾಮತರ ಅಂಗಡಿಗೆ ನಡೆದು ಶಿವಣ್ಣನನ್ನು ತಟ್ಟಿ ಎಬ್ಬಿಸಲು ನೋಡಿದ ದೇವಪ್ಪ. ಶಿವಣ್ಣ ಅಲುಗಾಡಲಿಲ್ಲ. ಅಯ್ಯೋ ಗುಡ್ಡದವ್ನೇ ಅನ್ನುತ್ತಾ ಮೂಗಿನ ಹೊಳ್ಳೆಗಳಿಗೆ ಬೆರಳು ಚಾಚಿದ. ಕ್ಷೀಣವಾಗಿ ಉಸಿರಾಟ ಸಾಗುತ್ತಿತ್ತು. ಒಂದೇ ಉಸಿರಿಗೆ ಓಡಿ ಹೋಗಿ ಶೀಲ ಮತ್ತಾಕೆಯ ತಮ್ಮನನ್ನು ಕರೆತಂದ. ಕಾಮತರು ಅಂಗಡಿ ಬಾಗಿಲು ತೆಗೆದು ಫೋನು ಮಾಡಿ ಕಾರು ತರಿಸಿ ಶಿವಣ್ಣನನ್ನು ಆಸ್ಪತ್ರೆಗೆ ಸಾಗಿಸಿದರು. ದೇವಪ್ಪ ಗುಡ್ಡದ ಕಡೆ ತಿರುಗಿ ಕೈ ಮುಗಿಯುತ್ತಾ ಓ ಗುಡ್ಡದವ್ನೇ... ಊರು ಹೋದರೆ ಹೋಗಲಿ.. ಶಿವಣ್ಣನಿಗೆ ಏನಾದರೂ ಆದರೆ ನಾನು ಈ ಜನ್ಮದಲ್ಲಿ ಮತ್ತೆ ನಿನಗೆ ಕೈ ಮುಗಿಯುದಿಲ್ಲ ಎಂದು ಗಟ್ಟಿ ಸ್ವರದಲ್ಲಿ ನುಡಿದ.
ಊರಿಗೆ ಭಾರೀ ಭಾರೀ ಯಂತ್ರಗಳು ಕಾಲಿಟ್ಟವು. ಶೀಲನ ಅಣ್ಣಂದಿರು ಬಂದು ಕೋಣಗಳನ್ನು ಹೊಡೆದುಕೊಂಡು ಹೋದರು. ಬೆಲೆಬಾಳುವ ಸಾಮಗ್ರಿ, ಪಕ್ಕಾಸು, ಬಾಗಿಲು, ಮರದ ಸೊತ್ತುಗಳನ್ನೆಲ್ಲಾ ಲಾರಿಯಲ್ಲಿ ಸಾಗಿಸಿದರು. ಶೀಲ ನೀಲನನ್ನು ಅಪ್ಪಿ ಹಿಡಿದು ಕಣ್ಣೀರು ಸುರಿಸಿ ಬೀಳ್ಕೊಂಡ ಮರುದಿನವೇ ನೀಲಮ್ಮಳೂ ಅಟ್ಟದಲ್ಲಿದ್ದ ಅಕ್ಕಿ ಮುಡಿ. ಮತ್ತಿತರ ಪಾತ್ರೆ ಪಗಡಿಗಳನ್ನು ಒಟ್ಟುಗೂಡಿಸಿ ಮಕ್ಕಳೊಂದಿಗೆ ತವರು ಮನೆಯ ದಾರಿ ಹಿಡಿದಳು. ಹೋಗುತ್ತಾ ದೇವಪ್ಪನೊಂದಿಗೆ ನಿಮಗೆ ಯಾವಾಗ ಬರಬೇಕಂತ ಅನ್ನಿಸುತ್ತದೋ ಆವಾಗ ಬಂದು ಬಿಡಿ ಅಂದಳು.
ನೀನು ಹೋಗು ಶೀಲಾ... ಊರು ಅದು ಹೇಗೆ ಸಮತಟ್ಟಾಗುತ್ತೋ ನೋಡಿಯೇ ಬರುತ್ತೇನೆ ಅಂದ ದೇವಪ್ಪ. ಇವರ ಭ್ರಾಂತಿ ಇನ್ನೂ ಕಡಿಮೆಯಾಗಿಲ್ಲ. ದೇವರೇ ಇವರಿಗೆ ಇನ್ನಾದರೂ ಬುದ್ದಿ ಕೊಡು ಎಂದು ಗೊಣಗಿಕೊಂಡಳು ನೀಲಮ್ಮ.
ಈಗ ಊರಿನಲ್ಲಿ ಯಾರ ಕಷ್ಟ ಸುಖವನ್ನು ಯಾರೂ ಕೇಳುವ ಹಾಗಿಲ್ಲ. ಒಂದೊಂದು ಮನೆಯದೂ ಒಂದೊಂದು ಕತೆ. ಎಲ್ಲರಿಗೂ ಗಡಿಬಿಡಿ. ಲೋರಿ ಪೊಬರ್ುವಿನ ಲಾರಿ ಎಲ್ಲರ ಸಾಮಾನುಗಳನ್ನು ಸಾಗಿಸುತ್ತಿತ್ತು. ಬಿಟ್ಟು ಹೋದ ಮನೆಗಳನ್ನು ಯಂತ್ರಗಳು ನೆಲಸಮಗೊಳಿಸುತ್ತಿದ್ದವು. ಭಾರೀ ಭಾರಿ ಯಂತ್ರಗಳು. ಊರೆಲ್ಲಾ ಧೂಳುಮಯ. ದೇವಪ್ಪ ಬೆಕ್ಕಸಬೆರಗಾಗಿ ನೋಡುತ್ತಿದ್ದಂತೆ ಊರಿನವರೆಲ್ಲಾ ಭಯ ಭಕ್ತಿಯಿಂದ ನೋಡುತ್ತಿದ್ದ ಕಾನರ್ಿಕದ `ಊರು ಅರ್ಧ ದಿವಸದಲ್ಲೇ ಹೇಳ ಹೆಸರಿಲ್ಲದಂತಾಗಿತ್ತು. ಎಂದೂ ತಳಕಾಣದ ಕರೆ ಮಾಯವಾಗಿತ್ತು.
ದ್ಯಾಪಾ ನಾಳೆ ನಾಡಿದ್ದು ನಿನ್ನ ಮನೆ ನೆಲಸಮವಾಗುತ್ತದೆ. ಅದಷ್ಟು ಬೇಗ ಮನೆ ಖಾಲಿ ಮಾಡು ಎಂದು ಕೆಲವರು ದೇವಪ್ಪನಿಗೆ ಸಲಹೆ ನೀಡಿದರು. ನನ್ನ ಮನೆಯಲ್ಲೇನಿದೆ ಕರ್ಮ ದೇವಪ್ಪ ಗೊಣಗಿಕೊಂಡ
ಅಂದು ಸಂಜೆ ಹೊಟ್ಟೆ ಭತರ್ಿ ಶರಾಬು ತುಂಬಿಸಿಕೊಂಡಿದ್ದ ದೇವಪ್ಪ. ಗುಡ್ಡದವ್ನ ದಯೆ ಶಿವಣ್ಣ ಈಗ ಗುಣಮುಖರಾಗಿ ಹೆಂಡತಿಯ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರಂತೆ ಯಾರೂ ದೇವಪ್ಪನಿಗೆ ಹೇಳಿದರು.
ಕೊನೆಯದಾಗಿ ತನ್ನ ಮನೆಯ ಜಗಲಿಯಲ್ಲಿ ದೇವಪ್ಪ ರಾತ್ರಿ ಕಳೆಯುತ್ತಿದ್ದ.
ಓ ನೀಲಾ... ಊರು ಹೋಯ್ತು ಕಣೇ... ನೀಲಾ ನೀನೇನೇ ಹೇಳು... ಅದು ಕಾನರ್ಿಕದ ಕೆರೆ ಹೌದು ಕಣೇ.... ಈ ಊರು ಕೆರೆಯ ನೀರು ಕುಡ್ದೋನಿಗೆ ನ್ಯಾಯ ನೀತಿ... ಕಷ್ಟ -ಕಾರ್ಪಣ್ಯ ಏನೂಂತ ಗೊತ್ತು ಕಣೇ ನೀಲ.. ಈ ಊರು ಬಿಟ್ಟು ಪರವೂರಿಗೆ ಹೋದ್ರು ನೋಡು... ಅಲ್ಲಿನ ನೀರು ಸಂಕಪಾಶಾನದ ನೀರು ಕಣೇ ನೀಲಾ... ಅದು ಸ್ವಾರ್ಥದ ನೀರು ಕಣೇ . ನೀಲಾ.... ಆ ಗುಡ್ಡದವ್ನು ಬಾರೀ ಚಾಲಾಕಿ ಕಣೇ ನೀಲಾ... ನಾನು ಕೈ ಮುಗಿಯೋದಿಲ್ಲಾಂತ ಆ ಶಿವಣ್ಣರನ್ನು ಬದುಕಿಸಿ ಮತ್ತೆ ಕೈ ಮುಗಿಯುವಂತೆ ಮಾಡ್ಕೊಂಡ ಕಣೇ..... ಅಯ್ಯೋ ಗುಡ್ಡದವ್ನೇ ನಾನು ಯಾರತ್ರ ಮಾತಾಡುತ್ತಿದ್ದೇನೆ.... ನೀಲಾ ತಾಯಿಮನೆಗೆ ಹೋಗಿಬಿಟ್ಯಲ್ಲೇ.... ನಾನ್ಯಾರಿಗೆ ಹೇಳಲಿ... ನೀಲಾ ನಾನ್ಯಾರಿಗೆ ಹೇಳಲಿ... ಊರು ಹೋಯ್ತು ಕಣೇ... ಇನ್ನು ನನಗ್ಯಾಕೆ ಈ ಊರು
ಹಿಂದೆಲ್ಲಾ ಆ ಗುಡಿಸಲಿನ ಜಗುಲಿಯಿಂದ ಹೊರಡುವ ಮಾತುಗಳಿಗೆ ನೀರವ ರಾತ್ರಿಯಲ್ಲಿ ಕಿರುಗುಟ್ಟುವ ಕ್ರಿಮಿ ಕೀಟಗಳು ಜತೆ ನೀಡುತ್ತಿದ್ದವು. ಈಗ ಹಗಲು ರಾತ್ರಿ ಎನ್ನದೆ ಭಯಂಕರ ಸದ್ದು ಮಾಡುವ ಯಂತ್ರಗಳು....
ದೇವಪ್ಪನ ಧ್ವನಿ ಯಾರಿಗೂ ಕೇಳಿಸುತ್ತಿರಲಿಲ್ಲ. ಆದರೂ ಆ ಮನೆಯಿಂದ ದೇವಪ್ಪನ ಧ್ವನಿ ಹೊರಡುತ್ತಲೇ ಇತ್ತು....
`ಕೆರೆ ಹೋಯ್ತು ಕಣೇ...
ನೀಲಾ... ಊರ ಕೆರೆ ಹೋಯ್ತು.
ಊರು ಹೋಯ್ತು ಕಣೇ...
ನೀಲಾ... ಊರು ಹೋಯ್ತು...
*******
ಶಬ್ದಾರ್ಥಗಳು :
ನೆಗರಿ = ಎದ್ದುಬಿದ್ದು.
ಬುಟ್ಟಿಚಾಕ್ರಿ = ಬಿಟ್ಟಿ ಚಾಕರಿ.
ಪಿಲಿಗೊಬ್ಬು = ಶರಾಬು ಕುಡಿದವರ ಹದ್ದು ಮೀರಿದ ವರ್ತನೆ.
ತಟ್ಟಿ ಕುಡ್ಪು = ಕಾಡು ಬಳ್ಳಿಯಿಂದ ಮಾಡಿದ ತಟ್ಟೆಯಾಕಾರದ ವಸ್ತು.
ನಟ್ಟಿ-ಕೈ = ನಾಟಿ-ಕೊಯ್ಲು.
ಬೈಪನೆ = ಜಾನುವಾರುಗಳಿಗೆ ಆಹಾರ ಹಾಕುವ ಎತ್ತರದ ಕಟ್ಟೆ.
ಕುಕರ್ಿಲ್ = ಈಚಲು ಮರದ ಬಳ್ಳಿಯಿಂದ ಮಾಡಿದ ಬುಟ್ಟಿ.
ಕಲೆಂಬಿ = ಹಳೆಯಕಾಲದ ಮರದ ಪೆಟ್ಟಿಗೆ.
Sunday, January 27, 2008
Subscribe to:
Post Comments (Atom)
1 comment:
ಕತೆ ಒಳ್ಳೆದುಂಟು ಮಾರಾಯ್ರೆ.
Post a Comment