Thursday, February 21, 2008

ಬಡತನ ಅಂದ್ರೆ ಹೀಗಿರುತ್ತೆ ಅವ್ರ ಮನ್ಯಾಗ ಒಂದೇ ಕಾರಿರುತ್ತೆ!

ಪಂಚಾಯತ್ ಕಚೇರಿನಾಗೆ ಬೋರಣ್ಣ `ನಂಗೆ ಬಿಪಿಯಲ್ ಕಾರ್ಡ್ ಯಾಕೆ ಕೊಡಾಕಿಲ್ಲಾ'ಂತ ತಗಾದೆ ತೆಗ್ದೇ ಬಿಟ್ಟ. `ನಾನು ಬಡವ ಸ್ವಾಮೀ ನನ್ನ ಮನ್ಯಾಗ ಟಿ.ವಿ ಇಲ್ಲ. ಫೋನ್ ಇಲ್ಲ. ಇರೋದು ಒಂದೇ ಒಂದು ನಲ್ವತ್ತು ವ್ಯಾಟಿನ ಬುರುಡೆ. ಅದೂ ಕೆಇಬಿ ಕೃಪಾ ಕಟಾಕ್ಷದಿಂದ ಸಂಜೆಗೆ ಉರಿಯಾಕಿಲ್ಲ. ಅದು ಉರಿದಾಗ ನಂಗೆ ಗಡದ್ದು ನಿದ್ದೆ ಬಂದು ಬಿಡುತ್ತೆ. ಹಂಗಿರುವಾಗ ನಂಗೇಕಿಲ್ಲ ಬಿಪಿಎಲ್ ಕಾರ್ಡ್' ಅಂತ ಒಂದೇ ಹಠ.
`ಹಂಗಲ್ಲಾ ಬೋರಣ್ಣಾ ನಿನ್ ಮಗಾ ಬ್ಯಾಂಕಾಗೆ ಮ್ಯಾನೇಜರ್ ಇದ್ದಾನೆ. ಮಂಗ್ಳೂರು ಪಟ್ಟಣದಾಗೆ ಮನೆ ಮಾಡ್ಯಾನೆ ನಿಂಗೆ ಹೆಂಗೆ ಕೊಡೋಕಾಗುತ್ತೆ ಬಿಪಿಎಲ್ ಕಾರ್ಡ್?' ಸಮಾಜ ಸೇವಕ ರಂಗಪ್ಪ ಬೋರಣ್ಣನ ಸಮಾದಾನ ಮಾಡೋಕೆ ಸುರಮಾಡ್ದ. `ನೋಡಪ್ಪಾ ಬಡತನ ಅಂದ್ರೆ ದುಡ್ಡಿಂದ ಬರೋದಲ್ಲ ಅದು ಮನಸ್ಸಿನಾಗ ಇರೋದು. ನೀನು ತೆಂಗಿನ ಕಾಯಿ ಕೀಳೋಕೆ ಹೋಗ್ತಿಯಲ್ಲಪ್ಪಾ ಒಂದು ಮರಾಕ್ಕೆ ಹತ್ತು ರೂಪಾಯಿ ರೊಕ್ಕ ಪಡೀತಿಲ್ಲೋ ಹೇಳು. ದಿನಾ ಎಷ್ಟು ಮರಾ ಹತ್ತುತೀ ಹೇಳ್ಬಿಡು' ಬೋರ ತಲೀ ಕೆರೆಯೂತ 'ದಿನಕ್ಕೆ ಏನಿಲ್ಲಾಂದ್ರು ಒಂದಿಪ್ಪತ್ತು ಇಪ್ಪತ್ತೈದು' ಅಂದ.
ಹಂಗಾರೆ ಇನ್ನೂರೈವತ್ತಾತು ನೋಡು. ದಿನಕ್ಕೆ ಇನ್ನೂರೈವತ್ತು ಅಂದ್ರೆ ತಿಂಗಳಿಗೆ ಎಳೂವರೆ ಸಾವ್ರ.... ನಿಂಗೇಕಪ್ಪಾ ಬಿಪಿಎಲ್ ಕಾಡರ್ು??'
ಬೋರಣ್ಣ ಮುಖ ಸಣ್ಣದು ಮಾಡಿ `ಆದ್ರೂ ಆದ್ರೂ....' ಅಂದ.
ಹಂಗಾರೆ ನಿಂಗೆ ಸಮಾಧಾನ ಆಗಿಲ್ಲ ಅಂತಾದ್ರೆ ನಾನೊಂದು ವಿಷ್ಯ ಹೇಳ್ತೇನೆ ಕೇಳು. ನಮ್ಮ ರಾಜಧಾನಿ ಅದಲ್ಲೋ ದಿಲ್ಲಿ. ಅಲ್ಲಿ ಒಂದು ಸಾಲಿನಾಗೆ ಮೇಷ್ಟ್ರು ಹೈಕಳಿಗೆ ಪ್ರಬಂಧ ಬರ್ಯೋಕೆ ಹೇಳಿದ್ರು. ಅದು ಅಂತಿಂತಾ ಸಾಲೀ ಅಲ್ಲ. ನಮ್ಮ ಮಾಜಿ ಪ್ರಧಾನಿ - ಅಧ್ಯಕ್ಷರುಗಳ ಮರಿಮಕ್ಕಳು. ಅಮಿತಾಬ್ ಬಚ್ಚನರ ಮೊಮ್ಮಕ್ಕಳು, ಶಾರೂಕ ಖಾನ್ನಂತವರ ಮಕ್ಕಳು ಬರೋ ಸಾಲಿ. ಅದ್ರಾಗ ಪ್ರಬಂಧ ಬರ್ಯೋಕೆ ಕೊಟ್ಟ ಇಚಾರ ಏನೂಂತಂದ್ರ 'ಬಡತನ ಅಂದ್ರೆ ಏನು?' ಅಂತ.
ಹೈಕ್ಲು ಬರೆದೇ ಬಿಟ್ವು. ಬಡತನಾ ಅಂತಂದ್ರೆ ಅವ್ರಿಗೆ ಜೀವನಾ ನಡೆಸೋಕೆ ಬಹಳ ಕಷ್ಟ ಇರ್ತದಾ... ಅವ್ರಿಗೆ ಮೂರು ಹೊತ್ತು ಊಟ ಮಾಡೋಕೆ ಕಷ್ಟ ಅದಾ.. ಅವ್ರ ಮನೆ ತೋಟಕ್ಕೆ ಮಾಲಿ ಇರೋಲ್ಲಾ. ಮನೆಯೋವ್ರೇ ಗಿಡಗಳಿಗೆ ನೀರು ಹೊಯ್ಬೇಕು. ಅವ್ರಿಗೆ ಒಂದೇ ಕಾರು ಇರ್ತದೆ. ಅವ್ರ ಮನೀ ಕಾರಿಗೆ ಡ್ರೈವರ ಇರೋಲ್ಲ. ಅವರಮ್ಮ ಅಪ್ಪನೇ ಮಕ್ಕಳನ್ನ ಶಾಲಿಗೆ ಬಿಡ್ಬೇಕು. ಶಾಪಿಂಗ್ಗೆ ಹೋಗಬ್ಬೇಕಾದ್ರೆ ಅವ್ರೆ ಕಾರು ಬಿಟ್ಕೊಂಡು ಹೋಗ್ಬೇಕು..
ಬಡತನಾ ಅಂದ್ರೆ ತುಂಬಾ ಕಷ್ಟ ಇರ್ತದಾ. ಅವ್ರ ಮನ್ಯಾಗಾ ಒಂದೇ ಆಳು ಇರ್ತಾನೆ... ಅಡುಗೆ ಮನೆಯವ್ರೇ ಮಾಡ್ಬೇಕು...' ರಂಗಣ್ಣ ಹೇಳುತ್ತಾನೆ ಇದ್ದ.
`ಸಾಕು ರಂಗಪ್ಪಣ್ಣ ಬಡತನಾ ಅಂದ್ರೆ ಏನೂಂತ ಈಗ ಅರ್ಥ ಆತು ಬಿಡ್ರಿ' ಅಂತ ಬೋರ ಬಿಪಿಎಲ್ ಕಾರ್ಡ್ ಮರ್ತು ಮನೆ ಹಾದಿ ಹಿಡ್ದ.

No comments: