Thursday, February 21, 2008

ಅರ್ಹತೆ. ಅರ್ಹತೆ.. ಅಂತಾ ಬಡ್ಕೋತಿಯಾ

ನಿಂಗೆ ತೆಂಗಿನ್ಮರ ಹತ್ತೋ ಅರ್ಹತೆ ಇದ್ಯಾ?
ಅದೊಂದು ಸಭೆ. ಸಭೆ ಅಂದ್ರೆ ಪಂಚಾತಿಕೆ. ನಮ್ಗೆ ಕಾಖರ್ಾನೆ ಕಟ್ಟೋಕೆ ಜಾಗ ಕೊಡ್ರಿ, ನಿಮ್ಗೆ ನಿಮ್ಮನಿಗೊಂದ್ರಂತ ಕೆಲ್ಸ ಕೊಡ್ತೀವಿ ಅಂತಾ ಹೇಳಿದ ಕಂಪೆನಿ ಆಡಳಿತ ಮಾತು ತಪ್ಪಿದಾಗ, ತಮ್ಮ ಕೆಲ್ಸ ಮುಗ್ದ ಮೇಲೆ ತಿಕಾ ತೋರಿಸ್ದಾಗ ಧರಣಿ, ಸತ್ಯಾಗ್ರಹ ಅಂತ ಬೀದಿಗಿಳಿದು ಕೂಗಾಡಿ ರಂಪಾ ಮಾಡಿ ರಸ್ತೆ ಮ್ಯಾಗೆ ಹೊರ್ಳಾಡಿ, ಬಳ್ಳಾರಿ ಜೈಲದಾಗ ಕ್ಯಾಂಪು ಮಾಡಿದ, ಕಾರ್ಖಾನೆಗಾಗಿ ಭೂಮಿ, ಮನೀ ಮೂರು ಕಾಸಿಗೆ ತ್ಯಾಗ ಅಂತಾ ಮಾಡಿದ ಜನ್ರು ಮತ್ತು ಕಂಪೆನಿಯ ಪರವಾಗಿ ಅಧಿಕಾರಿಗಳ ನಡುವೆ ಪಂಚಾತಿಕೆ.
'ನೀವು ಕೊಟ್ಟ ಮಾತು ಉಳಿಸ್ಕೊಳ್ರೀ. ನಮ್ಗೆ ಮೋಸ ಮಾಡ್ಬ್ಯಾಡ್ರಿ. ಏನ್ ಕೆಲ್ಸ ಕೊಡ್ತೀವಿ ಅಂತ ಮಾತು, ಸ್ಟಾಂಪು ಪೇಪರ್ದಾಗ ಬರ್ದು ಕೊಟ್ಟಿದ್ದಿರೋ ಆ ಥರಾ ಮಾಡ್ರಿ' ಅಂತ ತ್ಯಾಗಿಗಳ ಒಕ್ಕೊರಲ ಕೂಗು.
ಹಾವಿನ್ತರಾ ನಾಲ್ಗೆ ಎತ್ತ ಚಾಚೋಕೂ ಸಿದ್ಧವಾಗಿರೋ ಅಧಿಕಾರಿ ಮಾತಾಡೋಕೆ ಶುರುಹಚ್ದ. 'ನೀವೇನು ಹೇಳ್ತೀರೋ ಅದೇ ಖರೇ ಅದಾ. ನೀವು ಕಾಖರ್ಾನೆಗೆ ಹೊಲ-ಮನಿ ಬಿಟ್ಕೊಟ್ಟಿದ್ದೀರಿ. ನಿಮ್ಮ ತ್ಯಾಗನಾ ಎಷ್ಟು ಕೊಂಡಾಡಿದ್ರೂ ಸಾಕಾಗೋಲ್ಲ. ಆದ್ರೆ ಒಂದು ವಿಚಾರ ಮಾತ್ರ ನೀವು ತಿಳ್ಕೋಬೇಕು. ನಮ್ದು ಜಗತ್ತಿನಾಗೇ ಮುಖ್ಯ ವಸ್ತು ಉತ್ಪಾದನೆ ಮಾಡೋ ಕಾಖರ್ಾನೆ. ಇದಕ್ಕೆ ಸಯನ್ಸ್ ಕಲಿತಿರೋರು ಬೇಕಾಗುತ್ತೆ. ನಮ್ಮ ಕೆಲ್ಸಗಾರ್ರು ಅರ್ಹತೆ ಇರೋರು. ಅರ್ಹತೆ ಇಲ್ಲದೋರ್ಗೆಲ್ಲಾ ಕೆಲ್ಸ ಕೊಟ್ರೆ ನಮ್ಮ ಕಾರ್ಖಾನೆ ಸುಟ್ಟು ಬೂದಿಯಾಗೋಬ್ಬಹುದು. ಅವಾಗ ನಿಮ್ಮ ತ್ಯಾಗ ಎಲ್ಲ ಬೂದಿಯಾಗಿ ಬಿಡುತ್ತೆ. ನಿಮ್ಗೆಲ್ಲಾ ಅರ್ಹತೆ ಇದ್ರೆ ಕೆಲ್ಸ ಕೊಡ್ತೇವೆ. ಅಂತಾವ್ರು ಇದ್ರೆ ಹೇಳಿ. ನಮ್ಗೆ ಬೇಕಾಗಿರೋದು ಅರ್ಹತೆ, ಅರ್ಹತೆ...
ಸೇರಿರೋ ಹಳ್ಳಿ ಮಂದಿ ಗಪ್ ಚಿಪ್ಪಂತ ಕೇಳಿ ತಲೀ ಅಲ್ಲಾಡಿಸಿದ್ರು. 'ನಿಮ್ ಪಂಚಾತಿಕೆಗೆ ನಾನೂ ಬರ್ತೀನಿ' ಅಂತ ಹಠ ತೊಟ್ಟು ಬಂದಿದ್ದ ಬೋರಂಗೆ ಈಗ ಪಿತ್ತ ನೆತ್ತಿಗೇರಿಬಿಡ್ತು ಆತ ಅಬ್ಬರಿಸಿದ 'ಏನ್ರೀ ಅರ್ಹತೆ, ಅರ್ಹತೆ ಅಂತಾ ಬಾಯಿ ಬಡ್ಕೋತೀರಾ ನಾವು ನಿಮ್ಮಂಗೆ ಮನುಷ್ಯರಲ್ವಾ. ಭತ್ತ - ತೆಂಗು - ಕಂಗು ಬೆಳೆಸ್ತಿದ್ದ ನಮ್ಮ ಜಮೀನನ್ನ ಕಸ್ದುಕೊಂಡು ಈಗ ಅರ್ಹತೆ ಅಂತ ಒಟಗುಟ್ಟುತ್ತಿಯಲ್ಲಾ... ನಿಂಗೇನು ಅರ್ಹತೆ ಇದೆ. ನಿಂಗೆ ತೆಂಗಿನ್ಮರಾ ಹತ್ತಾಕೆ ಬರುತ್ತಾ. ಕಂಗು ಏರಿ ಅಡ್ಕೆ ಇಳಿಸೋಕೆ ಆಯ್ತದಾ? ನೇಜಿ ನೆಡೋಕೆ ಬರುತ್ತಾ. ಗದ್ದೆ ಉಳೋಕೆ ಆಗುತ್ತಾ. ಸೂಟು, ಬೂಟು ಹಾಕ್ಕೊಂಡ ಮಾತ್ರಕ್ಕೆ ನಮ್ಮನ್ನೆಲ್ಲಾ ಮಂಗ್ಯಾ ಮಾಡೋಕೆ ಆಗುತ್ತೆ ಅಂತಾ ಭಾವಿಸ್ಬೇಡ. ಅರ್ಹತೆ ಇಲ್ಲದೋರ ಭೂಮಿನ ಯಾಕೆ ಕಸ್ದುಕೊಂಡ್ರಿ. ಮರ್ಯಾದೆಯಾಗಿ ಭೂಮಿ ಬಿಟ್ಕೊಟ್ಟ ಮನೆಗಳ ಒಂದೊಂದು ಮಂದಿಗೆ ಅದೇನು ನಿನ್ನ ಸುಡುಗಾಡು ಕೆಲ್ಸ ಕೊಟ್ಬಿಡು ಪರದೇಸಿ ಮಗ್ನೆ...'
ಅಧಿಕಾರಿಗಳು ಪಂಚಾತಿಕೆಗೆ ಸೇರಿದ ನಾಯಕರು ಎಲ್ರೂ ಬೋರನ ಅಬ್ಬರಕ್ಕೆ ತಲೆ ತಗ್ಗಿಸಿಬಿಟ್ರು...

No comments: