Thursday, February 21, 2008

ಆಯಮ್ಮಂಗೆ ಹೊಟ್ಟೇಪಾಡು ಇವಂಗೆ ರೂಲ್ಸು!

ಆ ಹೊಟೇಲಿಗೆ ಕಾಮರ್ಿಕ ಅಧಿಕಾರಿ ಬಂದು ಬಿಟ್ಟು ಗಲ್ಲಾ ಪೆಟ್ಟಿಗೆಯ ಮುರುಕು ಕುರ್ಚಿಯನ್ನು ಆಕ್ರಮಿಸಿಕೊಂಡುಬಿಟ್ಟ. ಹೊಟೇಲು ಅಂದರೆ ನಮ್ಮ ಸಿಟಿಯಾಗಿರೋ ಲಕ ಲಕ ಹೊಳೆಯೋ, ಮಿರ ಮಿರ ಮಿಂಚೋ ಘನಾಂದಾರಿ ಹೊಟೇಲು ಅಲ್ಲ. ಅದು ನಾಲ್ಕಾರು ಹರಕು-ಮುರುಕು ಟೇಬಲ್ಲು, ಕುರ್ಚಿ ಇರೋ 'ಹೋಟೆಲ್ ಮಾಯಾನಗರಿ' ಎಂಬ ಹೆಸರಿನ ಒಂದು ಕೋಣೆ.
ಬಂದಿರೋ ಕಾರ್ಮಿಕ ಅಧಿಕಾರಿ ಮಹಾರಾಜರೆದುರು ಹೋಟೇಲು ಮಾಲಕ ತಿಪ್ಪಣ್ಣ ಖಡಕ್ ಚಹಾ ಗೋಳಿಬಜೆ ಇಟ್ಟು ಕೈಕಟ್ಟಿ ವಿನೀತ ಭಾವದಿಂದ 'ಏನಪ್ಪಣೆ' ಎಂಬಂತೆ ನಿಂತ.
ಏನಪ್ಪಾ ಹೋಟೇಲಿನ್ಯಾಗೆ ಕೆಲಸಕ್ಕೆ ಎಷ್ಟು ಮಂದಿ ಇದಾರೆ...?' ಕಾರ್ಮಿಕಾಧಿಕಾರಿ ದರ್ಪದಿಂದ ಪ್ರಶ್ನಿಸಿದ. ಅದೇ ಸಂದರ್ಭಕ್ಕೆ ಇನ್ನೂ ಹದಿನೈದು ವರ್ಷ ಮೀರದ ನಾಣಿ ದೊಡ್ಡ ಕೊಡಪಾನದಾಗೆ ನೀರು ತುಂಬಿಕೊಂಡು ಎಂಟ್ರಿ ತೆಕೊಂಡೇ ಬಿಟ್ಟ.
ಈಗ ಕಾರ್ಮಿಕಾಧಿಕಾರಿ ಕಣ್ಣು ಅರಳಿತು. ಬಾಲ ಕಾಮರ್ಮಿಕನೊಬ್ಬನನ್ನು ಪತ್ತೆ ಹಚ್ಚಿ ಬಿಟ್ಟೆ ಅಂತ ಆತ ಆಗಸಕ್ಕೇರಿಬಿಟ್ಟ. 'ಏನಯ್ಯಾ ಪುಟ್ಟ ಮಕ್ಕಳನ್ನ ಕೆಲ್ಸಕ್ಕೆ ಇಟ್ಕೋಬಾರ್ದು ಅಂತ ತಿಳಿಯೋದಿಲ್ವೇನಯ್ಯಾ? ನಿನ್ನ ಜೈಲಿಗೆ ಹಾಕಿಸ್ತೀನಿ, ಫೈನ್ ಬರೀತೀನಿ....' ಅಧಿಕಾರಿಯ ವಟಗುಟ್ಟುವಿಕೆಯನ್ನು ತಲೆ ತಗ್ಗಿಸಿಕೊಂಡು ಕೇಳಿಸಿಕೊಳ್ಳುತ್ತಾನೇ ನಿಂತ ತಿಪ್ಪಣ್ಣ.
'ಅಡ್ಡಬಿದ್ದೇ ದನೀ' ಎಂಬ ಕೀರಲು ಕಂಠ ಕಾರ್ಮಿಕಾಧಿಕಾರಿಯ ವಾಗ್ಜರಿಯನ್ನು ತಡೆಯಿತು. ಹೊಟೇಲಿನ ಬಾಗಿಲಲ್ಲಿ ಗಂಗವ್ವ ಕೈ ಮುಗ್ದು ನಿಂತಿದ್ದಳು. ಕಲ್ಲಿನ ಮೂರ್ತಿಯಂಗೆ ನಿಂತಿದ್ದ ತಿಪ್ಪಣ್ಣಂಗೆ ಈಗ ಜೀವ ಬಂದು ಬಿಡ್ತು. 'ಲೇ ಗಂಗೀ ನಿನ್ನ ಮಗನ್ನ ಈಗ್ಲೆ ಕರ್ಕೊಂಡ್ಹೋಗು. ಸಾಹೇಬ್ರು ಬಂದಿದ್ದಾರೆ. ಚಿಕ್ಕ ಮಕ್ಕಳ ಕೈಲಿ ಕೆಲ್ಸ ಮಾಡಿಸ್ಕೋಬಾರ್ದು ಅಂತ ರೂಲ್ಸು ಐತೆ. ಸಾಹೇಬ್ರು ಹೇಳಿದ ದಂಡ ನಾನು ಕಟ್ತೀನಿ. ಇನ್ನು ಮುಂದಕ್ಕೆ ನೀನೂ ಬೇಡ ನಿನ್ಮಗ ನಾಣೀನೂ ಬೇಡ. ಈಗ್ಲೇ ಕರ್ಕೋಡ್ಹೋಗು ಮಾರಾಯ್ತಿ' ಅಂದು ಬಿಟ್ಟ.
ಗಂಗಿ ಪಾತಾಳಕ್ಕೆ ಇಳಿದುಬಿಟ್ಳು. ಗಂಗಾ-ಸಿಂಧೂ ಪ್ರವಾಹ ಆಕೆಯ ಕಣ್ಣುಗಳಿಂದ ಹರಿಯಿತು. 'ಬೇಡಿ ಸಾಹೇಬ್ರೇ ಅವಂಗೆ ಮನೇಲಿ ಹೊಟ್ಟೆ ತುಂಬಾ ಊಟ ಕೊಡೋಕೂ ನಂಗೆ ಗತೀ ಇಲ್ಲ. ನೀವು ಅವಂಗೆ ರೊಕ್ಕ ಗಿಕ್ಕ ಏನು ಕೊಡ್ಬಾಡ್ರೀ. ವರ್ಷಕ್ಕೊಂದು ಅಂಗಿ ಚೆಡ್ಡಿ ಮಾತ್ರ ಕೊಡಿಸ್ರೀ. ನಿಮ್ಮ ದಮ್ಮಯ್ಯಾ ನಿಮ್ಗೆ ಪುಣ್ಯ ಬರುತ್ತೆ...' ಗಂಗಿ ತಿಪ್ಪಣ್ಣನ ಕಾಲು ಹಿಡ್ಕೊಂಡು ಬಿಟ್ಲು.
'ನನ್ನ ಕಾಲಿಗ್ಯಾಕೆ ಬೀಳ್ತಿಯಾ. ಅಲ್ಲಿದ್ದಾರೆ ನೋಡು ಅಧಿಕಾರಿ ಸಾಹೇಬ್ರು ಅವ್ರ ಕಾಲಿಗೆ ಬೀಳು. ನಿನ್ಗೆ ಉಪ್ಕಾರ ಮಾಡಿದ್ದಕ್ಕೆ ನನ್ನ ಮೇಲೆ ಕೇಸು ಹಾಕ್ತೀನಿ ಅಂತಾರೆ ಅವ್ರ ಕಾಲಿಗೆ ಬೀಳು' ತಿಪ್ಪಣ್ಣ ಕಾರ್ಮಿಕ ಅಧಿಕಾರಿ ಕಡೆಗೆ ಬೆರಳು ತೋರಿಸ್ದ.
ಗಂಗಿ ಕಾರ್ಮಿಕ ಅಧಿಕಾರಿಯ ಎದುರು ಸಾಷ್ಟಾಂಗ ನಮಸ್ಕಾರಾನೇ ಮಾಡಿಬಿಟ್ಲು. ಈ ಧನಿಯರದೇನೂ ತಪ್ಪಿಲ್ಲ. ನನ್ನ ಮಗಂಗೆ ಕೆಲ್ಸ ಕೊಟ್ಟು, ಊಟ ತಿಂಡಿ, ಅಂಗಿ ಚೆಡ್ಡಿ ಕೊಟ್ಟ ಮಹಾನುಭಾವರು ಇವ್ರು. ಇವ್ರನ್ನ ಜೈಲಿಗೆ ಹಾಕ್ಬೇಡ್ರೀ. ನನ್ನ ಮೇಲೆ ಕೇಸು ಬರೀರೀ. ನನ್ನ ಜೈಲಿಗೆ ಹಾಕ್ರಿ ಅಂತ ಗೋಗರೆದಳು.
ತಟ್ಟನೆದ್ದ ಕಾರ್ಮಿಕ ಅಧಿಕಾರಿ ಚಾ-ಗೋಳಿಬಜೆಯ ಐದು ರೂಪಾಯಿ ತಿಪ್ಪಣ್ಣನ ಕೈಗೆ ಹಾಕಿ. ಜೀಪನ್ನೇರಿ ಭುರ್ರಂತ ಹೋಗೇ ಬಿಟ್ರು.

No comments: