Thursday, February 21, 2008

ಹಾಗಂದ್ರೆ ಏನೂಂತ ಗೊತ್ತೇನ್ರೀ?

ಹಾಗಂದ್ರೆ ಏನೂಂತ ಗೊತ್ತೇನ್ರೀ?
ವೆಂಕಟನಿಗೆ ಸಮಾಜ ಸೇವೆ ಮಾಡಬೇಕೆಂಬ ಅಸೆ ಹುಟ್ಟಿಕೊಂಡುಬಿಡ್ತು. ಸೇವೆ ಅಂದ್ರೆ ಅಂತಿಂಥಾ ಸೇವೆ ಅಲ್ಲ. ಅದನ್ನು ಜನ್ರು, ಸಕರ್ಾರ ಗುರ್ತಿಸ್ಬೇಕು ಅಂತಾ ಛಲ ಹಚ್ಕೊಂಡು ಹಿರೀರು ಅವ್ರು ಇವ್ರು ಅಂತ ಸಲಹೆ ಪಡ್ಯೋಕೆ ಸುರು ಮಾಡ್ದ. ಬಿಟ್ಟಿ ಸಲಹೆ ಬೇಕಾಬಿಟ್ಟಿ ಹರಿದುಬಂದ್ರೂ ಪ್ರಯೋಜನಾಗುವಂತದ್ದು ಯಾವ್ದೂ ಕಾಣಿಸ್ಲಿಲ್ಲ. ಯಾರೋ ಒಬ್ರು ಒಂದ್ನಾಕು ದೊಡ್ಡ ದೊಡ್ಡೋರ್ರನ್ನು ಸೇರ್ಸಿಕೊಂಡು ಟ್ರಸ್ಟ್ ಅಂತ ಒಂದು ರಚಿಸ್ಕೊಂಡು ಬಿಡ್ರಿ. ಅದನ್ನು ರಿಜಸ್ಟರ್ ಮಾಡಿದ್ರೆ ಭಾಳಾ ಪ್ರಯೋಜನ ಉಂಟು. ನಿಮ್ಗೆ ಡೆಲ್ಲಿ, ಬೆಂಗಳೂರು ಕಡೆಯಿಂದ ಸಕರ್ಾರದ ಫಂಡು ಬರ್ತೈತೆ. ಚೆಂದಾಗಿ ಸಮಾಜ ಸೇವೆ ಮಾಡ್ಕೋಬಹುದು ಅಂದ್ರು.
ಟ್ರಸ್ಟ್ ರಚಿಸೋಕೆ ಓಡಾಡತೊಡಗಿದ ವೆಂಕಟ. ಊರ್ನಾಗೇ ಹೆಸರು ಮಾಡ್ಕೋಬೇಕು ಅಂತಾ ಆಸೆ ಇರೋ ವೈದ್ಯರು, ವಕೀಲರನ್ನು ಸೇರಿಸ್ಕೋಡು ಸೈ ಅನ್ನಿಸ್ಕೊಂಡ. ಅದೆಲ್ಲಿಂದಲೋ ಕನ್ನಡಾಭಿಮಾನಿ, ಧಮನಿ ಧಮನಿಗಳಲ್ಲಿ ಕನ್ನಡ ರಕ್ತ ಹರಿಯೋ ಕಾಮರಾಯ ಸೇರ್ಕೊಂಡು ಬಿಟ್ಟು `ನಾವು ಕನ್ನಡ ಸೇವೇನೂ ಗುರಿಯಾಗಿಟ್ಕೋಬೇಕು. ಯಾರಾದ್ರೂ ಕನ್ನಡ ಪಂಡಿತರನ್ನು ನಮ್ಮ್ ಟ್ರಸ್ಟ್ ಅಲ್ಲಲ್ಲ ನ್ಯಾಸದಾಗೆ ಸೇರಿಸ್ಕೋಬೇಕು' ಅಂತ ತಲೆತಿಂದ. ವೆಂಕಟನಿಗೂ ಹೌದೆನಿಸಿತು. ಕನ್ನಡದಾಗಿ ಐದಾರು ಪದಕ ಗೆದ್ದುಕೊಂಡ ಕನ್ನಡ ಪಂಡಿತೆ, ಶ್ಯಾಮಲಮ್ಮ ಐದನೇ ಟ್ರಸ್ಟಿಯಾಗಿ ಸೇರಿಕೊಂಡು ಬಿಟ್ರು.
ಟ್ರಸ್ಟ್ ಅಂದಮೇಲೆ ಅದಕ್ಕೊಂದು ಬೈಲಾ, ಗೊತ್ತು, ಗುರಿಗಳನ್ನು ಪಟ್ಟಿ ಮಾಡ್ಕೊಂಡು ದಾಖಲಾತಿ ಮಾಡಿಯೂ ಆಯ್ತು. ಇನ್ನು ದುಡ್ಡೆತ್ತಬೇಕಲ್ಲ. ಅದಕ್ಕೆ ವೆಂಕಟನೂ, ಕಾಮರಾಯನೂ ಸೇರಿಕೊಂಡು ಮನವಿ ಪತ್ರ ರಶೀದಿ ತಯಾರು ಮಾಡತೊಡಗಿದರು. ಕಾಮರಾಯ ಎಲ್ಲಾ ಶಬ್ದ, ಅಕ್ಷರಗಳನ್ನೂ ಕನ್ನಡದಲ್ಲೇ ಮುದ್ರಿಸಬೇಕೆಂದು ಹಠ ಹಿಡ್ದ. ಟ್ರಸ್ಟಿ ಎಂದು ಎಲ್ಲೂ ಬರೀಬಾರ್ದು ಗಂಡಸರ ಹೆಸರೆದುರು ವಿಶ್ವಸ್ಥರು ಎಂದು ಬರೆದರೆ ಶ್ಯಾಮಲಮ್ಮನ ಹೆಸರಿನೆದುರು ವಿಸ್ವಸ್ತೆ ಎಂದು ಬರೆದು ಹತ್ತಿಪ್ಪತ್ತು ಸಾವಿರ ಖಚರ್ು ಮಾಡಿ ಬಣ್ಣ ಬಣ್ಣದ ಮನವಿ ಪತ್ರ ಮುದ್ರಣ ಮಾಡಿ ಹಂಚಿಯೇ ಬಿಟ್ರು.
ಒಂದು ಭಾನುವಾರ ಬೆಳ್ಳಂಬೆಳಗ್ಗೆ ವೆಂಕಟನ ಮೊಬೈಲು ಕಿಣಿಗುಟ್ಟಿತು. ವೆಂಕಟ ಗುಂಡಿ ಅದುಮಿ ಹಲೋ ಅಂದ. ಅತ್ತ ಕಡೆಯಿಂದ ಶ್ಯಾಮಲಮ್ಮನ ಬಿರುನುಡಿ. 'ಏನಯ್ಯಾ ನೀವೆಲ್ಲಾ ಸೇರಿ ಟ್ರಸ್ಟಿ ಆಗಿ ಅತ್ತ ಒತ್ತಾಯಿಸಿ ಹೀಗಾ ನಂಗೆ ಶೇಮ್ ಮಾಡೋದು. ಮೆಮರಾಂಡಮ್ನಲ್ಲಿ ಏನೆಲ್ಲಾ ಗೀಚಾಕಿದ್ದೀರಲ್ಲಾ.... ತಲೆ...ಗಿಲೆ ಕೆಟ್ಟೋಗಿದ್ಯಾ ನಿಮ್ಗೆ?' ಅವಕ್ಕಾದ ವೆಂಕಟ 'ಏನಮ್ಮಾ ಏನು ಹೇಳ್ತಾ ಇದ್ದೀರಿ?' ಅಂದ.
'ಏನಿಲ್ಲ ಈಗ್ಲೆ ನಿಮ್ಮ ಉಳಿದ ಟ್ರಸ್ಟಿಗಳನ್ನೆಲ್ಲಾ ಸೇರ್ಸಿ ಮೀಟಿಂಗ್ ಕರೀರಿ. ನೀವು ಮಾಡಿದ ಉಪ್ಕಾರ ಸಾಕು. ನನ್ನ ಮಾನ ಹರಾಜಾಕಿದ್ದೀರಲ್ಲಾ. ಇವತ್ತೇ ರಾಜೀನಾಮೆ ಲೆಟರ್ ರೆಡಿ ಮಾಡಿದೀನಿ......' ಶ್ಯಾಮಲಮ್ಮ ಫೋನ್ ಕಟ್ ಮಾಡಿದ್ರು.
ವೆಂಕಟ ಅವಸವಸರವಾಗಿ ಎಲ್ರೂನೂ ಸೇರ್ಸಿ ಮೀಟಿಂಗ್ ಶುರುಮಾಡೇಬಿಟ್ಟ. ಗರಂ ಆಗಿದ್ದ ಶ್ಯಾಮಲಮ್ಮ ಈಗ ಕುಸು ಕುಸು ಅಳುತ್ತಿದ್ದರು. ವೆಂಕಟ ವಿನೀತನಾಗಿ ಶ್ಯಾಮಲಮ್ಮನ ಎದುರು ಕೈಕಟ್ಕೊಂಡು `ಏನಾಯ್ತು ಮೇಡಂ ಏನಾರ ಅಪಚಾರ ಆಯ್ತೇನ್ರಿ ಅಂದ'
`ಇನ್ನೇನಾಗ್ಬೇಕಾಗಿದೆ. ಮೂರು ಮಕ್ಕಳು ಮುತ್ತಿನಂತಾ ಗಂಡ ಇರುವಾಗ ನೀವೆಲ್ಲಾ ಸೇರ್ಕೊಂಡು ನನ್ನ ಏನೇನೋ ಮಾಡ್ಬಿಟ್ರಲ್ರೀ, ಮೆಮರಾಂಡಮ್ದಾಗ ಏನು ಬರ್ದಿದೀರಿ. ವಿಶ್ವಸ್ತೆ ಅಂದ್ರ ಅರ್ಥ ಗೊತ್ತೇನ್ರೀ ನಿಮ್ಗೆ?.' ಶ್ಯಾಮಲಮ್ಮ ದುಃಖ - ಕೋಪ ಎರಡರಿಂದಲೂ ನಡುಗುತ್ತಾ ಕೇಳಿದ್ರು.
`ಅದು ಹಂಗಲ್ಲಾ ಮೇಡಂ... ನಾನು... ನಾನು...' ವೆಂಕಟ ತೊದಲಿದ. `ಹಂಗೂ ಇಲ್ಲ, ಹಿಂಗೂ ಇಲ್ಲ. ನಾನೂ ಬೇಡ ನೀನೂ ಬೇಡ್ರಿ, ಮೊದ್ಲು ನನ್ ರಾಜೀನಾಮೆ ಸ್ವೀಕರಿಸ್ರೀ' ಅನ್ನುತ್ತಾ ಶ್ಯಾಮಲಮ್ಮ ರಾಜೀನಾಮೆ ಪತ್ರ ವೆಂಕಟನ ಮುಖಕ್ಕೆ ಎಸೆದು ಬಿರ ಬಿರನೆ ನಡೆದು ಹೋದ್ರು. ವೆಂಕಟ ಮನೆಗೆ ಹೋದವನೇ ಮೊದ್ಲು ಕನ್ನಡ ಶಬ್ದ ಕೋಶ ಎತ್ತಿ ವಿಸ್ವಸ್ತೆ ಅಂದ್ರೇನು ಅಂತ ಹುಡುಕಾಡಿದ.
ವಿಶ್ವಸ್ತೆ ಎಂಬ ಪದದ ಮುಂದೆ ಗಂಡ ಸತ್ತವಳು, ವಿಧವೆ ಎಂದು ಬರೆದಿತ್ತು. ಕಾಮರಾಯ ಎಂಬ ಕನ್ನಡ ಪ್ರೇಮಿಯನ್ನು ಜೀವಂತ ಸುಟ್ಟುಬಿಡಬೇಕೆಂದು ವೆಂಕಟನಿಗೆ ಅನಿಸಿತು.�

No comments: