Thursday, February 21, 2008

'ಅಂಗಾರೆ' ಮತ್ತೆ ಬಾ!

'ಅಂಗಾರೆ' ಮತ್ತೆ ಬಾ!

ಅ ಸರಕಾರಿ ಕಚೇರಿಗೆ ಬೋರ ಅಗತ್ಯ ಕೆಲಸಕ್ಕೇಂತ ಬಂದಿದ್ದ. ಹಳ್ಳಿ ಅಂದ್ರೆ ಉತ್ತರ ಕನ್ನಡದ ಹಳ್ಳಿ ಅಲ್ಲ. ಶುದ್ಧ ದಕ್ಷಿಣ ಕನ್ನಡದ ಹಳ್ಳಿ. ಅಂದಾಗೆ ಈ ಬೋರಣ್ಣನಿಗೆ ನಾಲ್ಕು ತದುಕಿ ಕನ್ನಡ ಮಾತಾಡು ಅಂತಂದ್ರೂ ಕನ್ನಡ ಬರಾಕಿಲ್ಲ. ಹಾಗಂತ ಯಕ್ಷಗಾನದ ಕನ್ನಡ ಅರ್ಥ ಆಗುತ್ತೆ. ಈ ದಕ್ಷಿಣ ಕನ್ನಡದಾಗೆ ಇರೂ ಹಳ್ಳಿ ಮಂದಿಗೆ ಕನ್ನಡ ಮಾತಾಡಕೆ ಬರೋದಿಲ್ಲಾದ್ರೂ ಅವ್ರಿಗೆ ಯಕ್ಷಗಾನ ಅಂತಂದ್ರೆ ಪಂಚಪ್ರಾಣ.
ಹಂಗೆ ಕಚೇರಿಗೆ ಬಂದ ಈ ಬೋರಪ್ಪಾಂಗೆ ಕನ್ನಡ ಬರೋಲ್ಲ. ಕಚೇರಿಯಲ್ಲಿರೋ ಆಸಾಮಿ ಶುದ್ಧ ಉತ್ತರ ಕನ್ನಡಿ. ಅದೆಲ್ಲಿಂದಲೋ ಉತ್ತರ ಕನ್ನಡದ ಹಳ್ಳೀ ಮೂಲೆಯಿಂದ ಬಂದಾವ. ಅವಂಗೆ ಈ ಬೋರನ ಅಂಗಿಯ ಕಿಸೆ ಮ್ಯಗೇ ಕಣ್ಣು. ಬೋರ ಅದೇನೋ ರೆಕಾಡರ್ು, ಗಿಕಾಡರ್ು ಅಂತ ಉತ್ತರ ಕನ್ನಡೀ ಮುಂದೆ ಕುಂತುಬಿಟ್ಟ. ಅದೇನಿಲ್ಲ ಐದು ನಿಮಿಷದಾಗೇ ಮಾಡಿ ಕೊಡೋ ಕೆಲ್ಸ. ಈ ಉತ್ತರ ಕನ್ನಡಿ ಅದೂ ಇದೂ ಮಾತಾಡಿ ಆಗ್ಲಪ್ಪಾ ಮಾಡಿಕೊಡೋಣಾ ಅಂತ ಬೋರನ ಜೇಬಿನ ದಪ್ಪನಾ ಕಣ್ಣಳತೇಲೇ ಪರೀಕ್ಷಿಸುತ್ತಾ ನುಡ್ದ.. 'ಮಾಡಿ ಕೊಟ್ಟರೆ ಬಾಳ ಉಪ್ಕಾರ' ಅಂತ ಬೋರ ಶುದ್ಧ ತುಳುವಿನಾಗೆ ಹೇಳಿದ.
'ಆಯ್ತು ಅಂಗಾರೆ ಮತ್ತೆ ಬಾ' ಅಂದ ಉತ್ತರ ಕನ್ನಡಿ. ಬೋರ ಆಯ್ತು ಸ್ವಾಮೀ ಅಂತ ಕೈ ಮುಗ್ದು ಹೊರನಡೆದ. ಈತನ ತಾವ ಒಂದ್ಹತ್ತು ರೂಪಾಯಿ ಅದ್ರೂ ಪೀಕಿಸಲೇ ಬೇಕೂಂತ ಉತ್ತರ ಕನ್ನಡೀ ಹಠ ತೊಟ್ಟ.
ಬೋರ ಒಂದು ವಾರ ಕಳೆದು ಒಂದು ದಿನ ಬಂದು ಉತ್ತರ ಕನ್ನಡೀ ಎದುರು ಕುಂತ. ಅಂವ ಅದೂ ಇದೂ ಮಾತಾಡಿ ಓರಿ ಗಣ್ಣಲ್ಲಿ ಬೋರನ ಜೇಬಿನ ಕಡೆ ನೋಡ್ದ. 'ರಿಕಾಡರ್ು ಯಾವಾಗ ಸಿಗುತ್ತೆ ಸ್ವಾಮೀ' ಬೋರ ನುಡಿದ. 'ಓ ಅದೇ, ಅದ್ಕೆ ಒಳಗಿನೋರ ಸಹಿ ಆಗ್ಬೇಕು' ಅಂದ ಉತ್ತರ ಕನ್ನಡಿ. 'ಹಾಗಾದ್ರೆ ಯಾವಾಗ ಬರ್ಬೇಕು ಸ್ವಾಮೀ' ಬೋರ ವಿನೀತನಾಗಿ ನುಡಿದ. 'ಅಂಗಾರೆ ನೀ ಮತ್ತೆ ಬಾ' ಅಂದ ಉತ್ತರ ಕನ್ನಡಿ... ಇಂಗೇ ಹಲವಾರು ಬಾರಿ ನಡೆಯಿತು. ಬೋರ `ಯಾವಾಗ ಬರ್ಲಿ' ಅಂತ ಕೇಳೋದು ಅಂವ 'ಅಂಗಾರೆ ಮತ್ತೆ ಬಾ' ಅಂತ ಹೇಳೋದು.
ಒಂದ್ಸಾರಿ ಅಂತೂ ಬೋರಾನ ತಲೆ ಪೂರಾ ಕೆಟ್ಹೋಯ್ತು. ಎಷ್ಟು ಸಾರೀಂತ ಬರೋದು. ಬಂದು ಬಂದು ಕಾಲಿನ ಕೆರ ಕೆಟ್ಟೋಯ್ತು. ಆತ ಸಿಟ್ಟಿಗೆದ್ದ. ಕಚೇರಿ ಮಂದಿಗೆಲ್ಲಾ ಕೇಳೋ ಹಂಗೆ ಬೊಬ್ಬೆ ಹೊಡ್ದ. 'ನಾನು ಎಷ್ಟು ಅಂಗಾರೆ (ಮಂಗಳವಾರ) ಅಂತ ಬರ್ಲಿ? ಪ್ರತೀ ವಾರದ ಅಂಗಾರೆನೂ ಬರ್ತಾ ಇದ್ದೀನಿ. ನೀ ಮತ್ತೆ ಮತ್ತೆ ಅಂಗಾರೆ ಬಾ, ಅಂಗಾರೆ ಬಾ ಅಂತಿಯಾ. ಮರ್ಯಾದೆಯಾಗಿ ರಿಕಾಡರ್ು ಕೊಡು ಇಲ್ಲಾಂದ್ರೆ ನಾ ಈ ಬಾಗಿಲಾಗೆ ಕುಂತು ಬಿಡ್ತೀನಿ' ಅಂತ ಬೋರ ಹೊಸ್ತಿಲ ಮಧ್ಯೆ ಕುಂತೇ ಬಿಟ್ಟ. ಯಾರೂ ಒಳಗೆ ಹೋಗೋ ಅಂಗಿಲ್ಲ. ಹೊರ ಬರೋ ಅಂಗಿಲ್ಲ.
ಬೋರಾನ ರೆಕಾಡರ್ು ಎರಡು ನಿಮಿಷದಲ್ಲಿ ತಯಾರಾಗಿ ಬಿಡ್ತು.

No comments: